News Karnataka Kannada
Monday, April 29 2024
ಬೆಂಗಳೂರು

ಹಿರಿಯ ನೌಕರರಿಗೆ ಸಿಹಿಸುದ್ದಿ ನೀಡಿದ ಕೆಎಸ್​​ಆರ್​ಟಿಸಿ

KSRTC gives good news to senior employees
Photo Credit : News Kannada

ಬೆಂಗಳೂರು: ಹಿರಿಯ ನೌಕರರಿಗೆ ಕೆಎಸ್​​ಆರ್​ಟಿಸಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು, ನೌಕರರಿಗೆ ಹೃದಯ ಸಂಬಂಧಿ ತಪಾಸಣೆ ಮಾಡಿಸಲು ಕೆಎಸ್​​ಆರ್​ಟಿಸಿ ಮುಂದಾಗಿದ್ದು, ಈಗಾಗಲೇ ಜಯದೇವ ಆಸ್ಪತ್ರೆಯೊಂದಿಗೆ ಐದು ವರ್ಷಗಳವರೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಮೂಲಕ ಸಾರಿಗೆ ನೌಕರರಿಗೆ ಯಾವುದೇ ರೀತಿಯ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಕುರಿತು ತಪಾಸಣೆಯನ್ನು ನಡೆಸಿ ಚಿಕಿತ್ಸೆ ಒದಗಿಸಲಿದೆ. ಇದರಿಂದ ಸಾವಿರಾರು ನೌಕರರಿಗೆ ಅನುಕೂಲವಾಗಲಿದೆ.

ನಿಗಮವು “ಆರೋಗ್ಯವಂತ ನೌಕರರೇ ಸಂಸ್ಥೆಯ ಆಸ್ತಿ” ಎಂದು ಪರಿಗಣಿಸಿದೆ. ನಿಗಮದಲ್ಲಿ ಒಟ್ಟು 34000 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಆ ಪೈಕಿ 24686 ಚಾಲಕ ಮತ್ತು ನಿರ್ವಾಹಕರುಗಳಾಗಿರುತ್ತಾರೆ. ನಿಗಮದ ನೌಕರರ ಕಾರ್ಯಸ್ವರೂಪ, ಜೀವನಶೈಲಿ ಮತ್ತು ಇತರೆ ಕಾರಣಗಳಿಂದಾಗಿ ನೌಕರರಲ್ಲಿ ಹೃದಯಾಘಾತ/ ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾಗಿದೆ. ಅದರಲ್ಲೂ, 40 ವರ್ಷ ಮೇಲ್ಪಟ್ಟ ಚಾಲಕರು, ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ.

ಈ ಸಂಬಂಧ, ನಿಗಮದ ಸಮಸ್ತ ಸಿಬ್ಬಂದಿಗಳನ್ನು ಹೃದಯ ಸಂಬಂಧಿಸಿದ ನಿರ್ಧಿಷ್ಟವಾದ ಪರೀಕ್ಷೆ/ ತಪಾಸಣೆಗಳಿಗೆ ಒಳಪಡಿಸುವ ಅವಶ್ಯಕತೆ ಮನಗಂಡು, ನೌಕರರಲ್ಲಿ ಜಾಗೃತಿ/ ಅರಿವು ಮೂಡಿಸಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಅನುವಾಗುವ ಉದ್ದೇಶದಿಂದ ಶ್ರೀ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಹೃದಯ ಸಂಬಂಧಿ ಹತ್ತು ಇತರೆ ವೈದ್ಯಕೀಯ ತಪಾಸಣೆಗಳನ್ನು ನೌಕರರಿಗೆ ಮಾಡಿಸಲು ತೀರ್ಮಾನಿಸಿ, ಮುಂದಿನ ಐದು ವರ್ಷಗಳ ಅವಧಿಯ ಒಡಂಬಡಿಕೆಯನ್ನು ಇಂದು(ನ.02)ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್ ರವರು ಮನುಷ್ಯನ ಆರೋಗ್ಯ ಬಹಳ ಮುಖ್ಯವಾಗಿದ್ದು, ಅದನ್ನು ಬೆಲೆ ಕೊಟ್ಟು ಕೊಂಡುಕೊಳ್ಳಲಾಗದು ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಮಾಣ ಅತಿ ಹೆಚ್ಚಳವಾಗಿದ್ದು ಚಿಕ್ಕ ವಯಸ್ಸಿನವರಲ್ಲಿಇದು ಅಧಿಕವಾಗಿದೆ. ವಯಸಾದ ತಂದೆ ತಾಯಿಗಳು ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಸ್ಥಿತಿ ಎದುರಾಗಿದೆ. ಮನುಷ್ಯನ ದೇಹವೇ ಅವನ ಪ್ರಮುಖ ಬಾಳ ಸಂಗಾತಿಯಾಗಿದ್ದು ಅದನ್ನು ಯಾವುದೇ ಕಾಯಿಲೆಗಳಿಂದ ರಕ್ಷಿಸಿಕೊಳ್ಳುವುದು ಅವರ ಪ್ರಮುಖ ಜವಾಬ್ದಾರಿ ಆಗಿರುತ್ತದೆ.

ಬಿಎಂಟಿಸಿಯಲ್ಲಿಯೂ ಈ ಯೋಜನೆಯಿದ್ದು, ಅಲ್ಲಿ 45 ವರುಷ ಮೇಲ್ಪಟ್ಟ ಸಿಬ್ಬಂದಿಗಳು ಈ ಯೋಜನೆಗೆ ಒಳಪಡುತ್ತಾರೆ, ಆದರೆ ಕೆ ಎಸ್‌ ಆರ್‌ ಟಿ ಸಿಯಲ್ಲಿ 40 ವರುಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಈ ಯೋಜನೆ ಅನುಷ್ಠಾನ ಮಾಡಿರುವುದು ಒಳ್ಳೆಯದು ಏಕೆಂದರೆ ಈಗ 40 ರ ಆಸುಪಾಸಿನಲ್ಲಿಯೇ ಹೃದಯ ಸಂಬಂಧಿ ತೊಂದರೆಗಳು ಹೆಚ್ಚು ವರದಿಯಾಗುತ್ತಿವೆ.

ನಿಗಮವು ನಮ್ಮ ಜಯದೇವ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಇನ್ನು ಮುಂದೆ ಸಿಬ್ಬಂದಿಗಳ ಹೃದಯ ಸಂಬಂಧಿ ಕಾಯಿಲೆಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆ ಕೊಡುವ ಜವಾಬ್ದಾರಿ ನಮ್ಮ ಸಂಸ್ಥೆಯ ಮೇಲಿದ್ದು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ನಮ್ಮ ಸಂಸ್ಥೆಯ ಮೈಸೂರಿನ ಕೇಂದ್ರದಲ್ಲಿಯೂ ಸಹ ಅಲ್ಲಿಗೆ ಸಮೀಪವಿರುವ ವಿಭಾಗಗಳ ಸಿಬ್ಬಂದಿಗಳಿಗೆ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿಗಮದಲ್ಲಿ ಸೇವೆಯಲ್ಲಿ ಇರುವಾಗ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆ ಅಡಿಯಲ್ಲಿ ಒಂದು ಕೋಟಿ ಗಳ ಪರಿಹಾರ ಮೊತ್ತವನ್ನು ವಿತರಿಸಲಾಯಿತು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಇಂದು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ನಿಗಮವು ಒಡಂಬಡಿಕೆ ಮಾಡಿಕೊಂಡಿದ್ದು, ಹೃದಯ ಸಂಬಂಧಿ ತಪಾಸಣೆಗಳನ್ನು/ ಪರೀಕ್ಷೆಗಳನ್ನು ನಿರಂತರವಾಗಿ ಮಾಡಿಸುವುದರಿಂದ ಸಂಭವನೀಯ ಹೃದಯಾಘಾತವನ್ನು ತಪ್ಪಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಜೀವಗಳ ರಕ್ಷಣೆ ಆಗುತ್ತದೆ ಎಂದು ತಿಳಿಸಿದರು.

ಸಿಬ್ಬಂದಿಗಳು ನಿಗಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತಾರೆ ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ ಕೂಡ ಆಗಿದೆ ಎಂದು ತಿಳಿಸುತ್ತಾ ಡಾ. ಮಂಜುನಾಥ್‌ ರವರು ಕಡಿಮೆ ದರದಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ನಂದಿನಿ ದೇವಿ. ಕೆ, ಭಾ.ಆ.ಸೇ, ನಿರ್ದೇಶಕರು (ಸಿ ಮತ್ತು ಜಾ), ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು