ಸಿಯೋಲ್ : ದಕ್ಷಿಣ ಕೋರಿಯಾದ ಮಹಿಳೆಯರು #women_shortcut_campaign ಎನ್ನುವ ನೂತನ ಮತ್ತು ವಿಶಿಷ್ಟ ಹ್ಯಾಷ್ ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅದರ ಹಿಂದಿನ ಘಟನೆ ಅತ್ಯಂತ ಸ್ವಾರಸ್ಯಕರವಾದುದು. ಏಕೆಂದರೆ ಆ ಅಭಿಯಾನಕ್ಕೆ ಪ್ರೇರಣೆ ದಕ್ಷಿಣ ಕೋರಿಯಾದ ಬಿಲ್ಲುಗಾರ್ತಿ ಆನ್ ಸಾನ್. ಈಕೆ ಟೊಕಿಯೊ ಒಲಿಂಪಿಕ್ಫ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾಳೆ. ಆದರೆ ತನ್ನ ಸಾಧನೆಯನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಆಕೆಗೆ ಆಗುತ್ತಿಲ್ಲ. ಏಕೆಂದರೆ ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಕೂದಲಿನ ವಿಚಾರವಾಗಿ ನಡೆದ ಟ್ರಾಲಿಂಗ್.
ಆಕೆ ತುಂಡುಗೂದಲಿಗೆ ದೇಶದ ಪುರುಷ ಆನ್ ಲೈನ್ ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದ.ಕೊರಿಯಾದಲ್ಲಿ ತುಂಡುಗೂದಲನ್ನು ಹೊಂದಿದ ಯುವತಿಯರು, ಮಹಿಳೆಯರನ್ನು ಕೆಟ್ಟದಾಗಿ ಕಾಣುವ ಪ್ರವೃತ್ತಿಯಿದೆ.
ದಕ್ಷಿಣ ಕೊರಿಯಾದಲ್ಲಿ ತುಂಡುಗೂದಲು ಬಿಟ್ಟ ಯುವತಿಯರನ್ನು ಸ್ತ್ರೀವಾದಿಗಳೆಂದು ಹೀಗಳೆಯುವುದು ಮಾತ್ರವಲ್ಲ ಅವರನ್ನು ಪುರುಷ ದ್ವೇಷಿಗಳೆಂದೂ ಕಾಣುತ್ತಾರೆ. ಹೀಗಾಗಿಯೇ ಒಲಿಂಪಿಕ್ಸ್ ಪದಕ ಗೆದ್ದುದರ ಹೊರತಾಗಿಯೂ ಆನ್ ಸಾನ್ ರನ್ನು ಅಲ್ಲಿನ ಪುರುಷರು ಕುಹಕ ಪೋಸ್ಟ್ ಗಳಿಂದ ಚುಚ್ಚಿದ್ದರು.
ಇದರಿಂದ ಅಲ್ಲಿನ ಮಹಿಳಾ ಸಮುದಾಯ ಒಗ್ಗಟ್ಟಾಗಿ #women_shortcut_campaign ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಆನ್ ಸಾನ್ ಅವರಿಗೆ ಬೆಂಬಲವಾಗಿ ದ.ಕೊರಿಯ ಯುವತಿಯರು ತಮ್ಮ ಉದ್ದಗೂದಲನ್ನು ತುಂಡಾಗಿಸಿ ಫೋಟೋ ತೆಗೆದು #women_shortcut_campaign ಎಂದು ನಮೂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ