ಲಂಡನ್: ಕೋವಿಡ್-19 ನಿಯಮಾವಳಿ ಉಲ್ಲಂಘಿಸಿ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಹಣಕಾಸು ಸಚಿವ ರಿಶಿ ಸುನಕ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಘೋಷಿಸಿದ್ದಾರೆ.
ಈ ಉಲ್ಲಂಘನೆಯನ್ನು ಬ್ರಿಟಿಷ್ ಮಾಧ್ಯಮ ಪಾರ್ಟಿಗೇಟ್ ಎಂದು ಬಿಂಬಿಸಿತ್ತು. ಈ ಘೋಷಣೆ ಬೆನ್ನಲ್ಲೇ ಉಭಯ ಮುಖಂಡರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ತಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಆರಂಭದಲ್ಲಿ ಹೇಳಿಕೆ ನೀಡಿದ್ದ ಜಾನ್ಸನ್, ತಾನು ಸಮಾವೇಶದಲ್ಲಿ ಪಾಲ್ಗೊಂಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಆದರೆ ಈ ಕಾರಣಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ದಂಡವನ್ನು ಚುಕ್ತಾ ಮಾಡಿ ಕೆಲಸದ ಕಡೆಗೆ ಗಮನ ನೀಡುತ್ತೇನೆ ಎಂದು ಹೇಳಿದ್ದಾರೆ.
ಜಾನ್ಸನ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯಲ್ಲಿ ಮತ್ತು ಸಂಪುಟ ಕಚೇರಿಯ 12 ಮಂದಿ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2020ರ ಜೂನ್ 19ರಂದು ಜಾನ್ಸನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಮಾವೇಶ ನಡೆದಿತ್ತು. ಸುನಕ್ ಕೂಡಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಕ್ಕೆ ಕ್ಷಮೆಯಾಚಿಸಿ ಹೇಳಿಕೆ ನೀಡಿದ್ದಾರೆ.