ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಎಲ್ಲ ಬ್ಯೂಟಿ ಸಲೂನ್ಗಳು ಕೂಡಲೇ ಬಾಗಿಲು ಮುಚ್ಚಬೇಕು ಎಂದು ತಾಲಿಬಾನ್ ಮಂಗಳವಾರ ಹೇಳಿದೆ. ಸಲೂನ್ಗಳಲ್ಲಿ ನೀಡಲಾಗುವ ಸೇವೆಗಳಿಗೆ ಇಸ್ಲಾಂನಲ್ಲಿ ನಿಷೇಧವಿದೆ. ಜತೆಗೆ, ಮದುವೆ ಸಮಾರಂಭಗಳಲ್ಲಿ ಸಲೂನ್ಗಳು ವಧುವಿನ ಕುಟುಂಬದವರ ಆರ್ಥಿಕ ಹೊರೆಗೂ ಕಾರಣವಾಗುತ್ತಿವೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ.
ಸಲೂನ್ಗಳನ್ನು ಮುಚ್ಚಲು ಈ ಹಿಂದೆ ಒಂದು ತಿಂಗಳ ಗಡುವು ನೀಡಲಾಗಿತ್ತು. ಈ ನಿರ್ಧಾರದ ವಿರುದ್ಧ ಅಲ್ಲಲ್ಲಿ ಕೆಲ ಪ್ರತಿಭಟನೆಗಳು ನಡೆದಿದ್ದವಾದರೂ, ಅದನ್ನೆಲ್ಲ ಹಿಮ್ಮೆಟ್ಟಿಸಿರುವ ಸರ್ಕಾರ ಸಲೂನ್ಗಳಿಗೆ ಬೀಗ ಹಾಕಿಸಿದೆ. ಒಂದು ವೇಳೆ ಸಲೂನ್ಗಳನ್ನು ಮುಚ್ಚದೇ ಹೋದರೆ, ಸೇನಾ ಬಲ ಪ್ರಯೋಗಿಸಲಾಗುತ್ತದೆಯೇ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಸರ್ಕಾರದ ಈ ನಿರ್ಧಾರದಿಂದಾಗಿ 60,000 ಮಹಿಳೆಯರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಮಹಿಳಾ ಹಕ್ಕುಗಳ ಸಂಘಟನೆಗಳು ತಿಳಿಸಿವೆ.