ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ವಿವಾಹ ಸಮಾರಂಭದ ವೇಳೆ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜಿಲ್ಲೆಯ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿರುವ ಸರ್ಕಾರಿ ಪರ ಸಮುದಾಯದ ನಾಯಕ ನೂರ್ ಅಲಮ್ ಮೆಹ್ಸೂದ್ ಅವರ ಮನೆಯಲ್ಲಿ ಈ ದಾಳಿ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಅದ್ನಾನ್ ಖಾನ್ ಹೇಳಿದ್ದಾರೆ

ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಾಹುತಿ‌ ಬಾಂಬ್‌ ಸ್ಫೋಟದ ತೀವ್ರತೆಗೆ ಮದುವೆ ಮನೆಯ ಛಾವಣಿ ಕುಸಿದುಬಿದ್ದಿದೆ. ಇದರಿಂದ ರಕ್ಷಣಾ ಕಾರ್ಯ ನಡೆಸಲು ಪೊಲೀಸರು ಕೆಲಕಾಲ ಹೆಣಗಾಡುತ್ತಿದ್ದರು. ನಂತರ ಇದೊಂದು ಆತ್ಮಹತ್ಯಾ ದಾಳಿ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಸಜ್ಜಾದ್ ಅಹ್ಮದ್ ಸಾಹಿಬ್ಜಾದಾ ಅವರು ಖಚಿತಪಡಿಸಿದ್ದಾರೆ.

ದಾಳಿಯ ಹೊಣೆಯನ್ನು ಯಾವುದೇ ಗುಂಪು ತಕ್ಷಣಕ್ಕೆ ಹೊತ್ತುಕೊಂಡಿಲ್ಲ. ಆದಾಗ್ಯೂ, ಶಂಕೆಯು ಪಾಕಿಸ್ತಾನಿ ತಾಲಿಬಾನ್ ಮೇಲೆ ಬೀಳುವ ಸಾಧ್ಯತೆಯಿದೆ, ಅವರನ್ನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ ಅಥವಾ ಟಿಟಿಪಿ ಎಂದೂ ಕರೆಯುತ್ತಾರೆ ಮತ್ತು ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹಲವಾರು ದಾಳಿಗಳನ್ನು ನಡೆಸಿದ್ದಾರೆ.