ನಂಜನಗೂಡು: ಸರ್ಕಾರಿ ಶಾಲೆ ಅಂದ್ರೆ ಮೂಗುಮುರಿಯುವ ಜನರೇ ಹೆಚ್ಚು. ಆದ್ರೆ ಈ ಆರೋಪವನ್ನ ಸುಳ್ಳು ಮಾಡುವ ಸರ್ಕಾರಿ ಶಾಲೆಯೊಂದು ನಂಜನಗೂಡಿನ ಕಲ್ಲಹಳ್ಳಿ ಬಳಿ ತಲೆ ಎತ್ತಿ ನಿಂತಿದೆ. ಶಾಲೆಯ ಕಟ್ಟಡ ಹೊರನೋಟದಲ್ಲೇ ಆಕರ್ಷಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಯಾವುದೇ ಖಾಸಗಿ ಶಾಲೆಗಳನ್ನೇ ನಾಚಿಸುವಂತೆ ಈ ಸರ್ಕಾರಿ ಶಾಲೆ ತಲೆ ಎತ್ತಿ ನಿಂತಿದೆ. ಆಧುನಿಕತೆಯ ಸ್ಪರ್ಶ ಈ ಶಾಲೆಗೆ ನೀಡಲಾಗಿದೆ. ಐಶಾರಾಮಿ ಬಂಗಲೆಯಂತೆ ಹೊರನೋಟದಲ್ಲಿ ಕಂಡುಬರುತ್ತದೆ. ಇನ್ನು ಒಳ ಹೊದರಂತೂ ಸೌಲಭ್ಯಗಳು ಕಣ್ಣು ಕುಕ್ಕುವಂತಾಗುತ್ತದೆ. ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1 ರಿಂದ 6 ನೇ ತರಗತಿ ವರೆಗೆ ನಡೆಯುತ್ತಿದೆ.

10 ಕ್ಕೂ ಹೆಚ್ಚು ಸುಸಜ್ಜಿತ ಕೊಠಡಿಗಳನ್ನ ಹೊಂದಿದೆ. ನುರಿತ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗಾಗಿ ಸಿದ್ದಹಸ್ತರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಉತ್ತಮ ಆಟದ ಮೈದಾನ, ಸ್ವಚ್ಛ ಶೌಚಾಲಯ, ಸಾಕಷ್ಟು ಪುಸ್ತಕಗಳ ಸಂಗ್ರಹವಾಗಿರುವ ಗ್ರಂಥಾಲಯ, ಕಂಪ್ಯೂಟರ್ ತರಬೇತಿ, ಲ್ಯಾಬ್, ವಿದ್ಯಾರ್ಥಿಗಳು ಕೂರುವ ಆಧುನಿಕ ಶೈಲಿಯ ಚೇರ್ ಗಳು, ಪಠ್ಯೇತರ ಚಟುವಟಿಕೆಗಳನ್ನ ಪ್ರೋತ್ಸಾಹಿಸುವ ಆಟಿಕೆಗಳು, ಶೈಕ್ಷಣಿಕ ಚಟುವಟಿಕೆಗಳನ್ನ ಉತ್ತೇಜಿಸುವ ಮಾದರಿಗಳು ಎಲ್ಲವೂ ಹೈಟೆಕ್ ಆಗಿರುವುದೇ ಈ ಶಾಲೆಯ ವಿಶೇಷ.

ನಂಜನಗೂಡಿನಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಈ ಶಾಲೆ ಎಲ್ಲಾ ರೀತಿಯ ಅತ್ಯುನ್ನತವಾದ ಸೌಲಭ್ಯಗಳನ್ನ ಹೊಂದಿದೆ. ಆದ್ರೆ ದಾಖಲಾತಿಯೇ ಮುಖ್ಯ ಸಮಸ್ಯಯಾಗಿದೆ. ಖಾಸಗಿ ಶಾಲೆಗಳ ಭ್ರಮಾಲೋಕದಲ್ಲಿ ಈ ಶಾಲೆಯತ್ತ ಪೋಷಕರು ಗಮನ ಹರಿಸದಿರುವುದು ವಿಪರ್ಯಾಸ. ಕೈಗಾರಿಕಾ ಪ್ರದೇಶದ ಸಮೀಪವೇ ಸುಸಜ್ಜಿತ ಶಾಲೆ ಇದೆ. ಈ ಹಿನ್ನಲೆ ಜುಬಿಲಿಯೆಂಟ್ ಕಾರ್ಖಾನೆಯವರು ವಿಶೇಷ ಆಸಕ್ತಿ ವಹಿಸಿ ಈ ಸರ್ಕಾರಿ ಶಾಲೆಗೆ ಆಧುನಿಕತೆಯ ಸ್ಪರ್ಶ ನೀಡಿದ್ದಾರೆ.
ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಮಕ್ಕಳ ದಾಖಲಾತಿ ಕೇವಲ 40. ಹೆಸರಿಗೆ ಸರ್ಕಾರಿ ಶಾಲೆಯಾದ್ರೂ ಖಾಸಗಿ ಶಾಲೆಯನ್ನ ಮೀರಿಸುವಂತಹ ಸೌಲಭ್ಯಗಳನ್ನ ಹೊಂದಿರುವ ಈ ಶಾಲೆಗೆ ಮಕ್ಕಳನ್ನ ದಾಖಲಿಸುವ ಪ್ರಯತ್ನ ಭರದಿಂದ ಸಾಗಬೇಕಿದೆ. ದಾಖಲಾತಿ ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗುತ್ತಿದೆ. ಇದಕ್ಕೆ ಸೌಲಭ್ಯಗಳ ಕೊರತೆಯೇ ಒಂದು ಅಪವಾದ. ಆದ್ರೆ ಈ ಸರ್ಕಾರಿ ಶಾಲೆ ಎಲ್ಲ ಕೊರತೆಯನ್ನೂ ನೀಗಿಸಿದೆ. ಪೋಷಕರು ತಮ್ಮಮಕ್ಕಳನ್ನ ದಾಖಲಿಸುವತ್ತ ಮನಸ್ಸು ಮಾಡಬೇಕಿದೆ.

