ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊದಲ್ಲಿನ ಮಸೀದಿ ಬಳಿ ಇಬ್ಬರು ಹದಿಹರೆಯದ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಸೇರಿ ಮೂವರು ಪುರುಷರು ಮೃತಪಟ್ಟಿದ್ದಾರೆ.
ಸ್ವಲ್ಪ ಸಮಯದ ಬಳಿಕ, ಸಮೀಪದ ಕಾರಿನಲ್ಲಿ 17 ಮತ್ತು 19 ವರ್ಷದ ಹದಿ ಹರೆಯದ ಬಂದೂಕುಧಾರಿಗಳ ಎರಡು ಮೃತದೇಹಗಳು ಪತ್ತೆಯಾಗಿವೆ. ದಾಳಿ ಬಳಿಕ ಅವರು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸ್ಯಾನ್ ಡಿಯಾಗೊ ಕೌಂಟಿಯ ಅತಿದೊಡ್ಡ ಇಸ್ಲಾಮಿಕ್ ಕೇಂದ್ರ ಮಸೀದಿ ಸಂಕೀರ್ಣದ ಹೊರಗೆ ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ಇದು ಆವರಣದೊಳಗಿನ ಜನ ಮತ್ತು ವಿದ್ಯಾರ್ಥಿಗಳಲ್ಲಿ ಭೀತಿಗೆ ಕಾರಣವಾಗಿತ್ತು. ಘಟನೆ ಬಳಿಕ, ಮಸೀದಿ ಸಂಕೀರ್ಣದೊಳಗಿನ ಶಾಲೆಗೆ ತೆರಳುತ್ತಿದ್ದ ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಈ ಗುಂಡಿನ ದಾಳಿಯನ್ನು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ಶಂಕಿತ ದ್ವೇಷದ ದಾಳಿ ಎಂದು ಪೊಲೀಸರು ಹೇಳಿದ್ದಾರೆ. ದಾಳಿಕೋರರಲ್ಲಿ ಒಬ್ಬ ತನ್ನ ಪೋಷಕರ ಬಳಿ ಇದ್ದ ಬಂದೂಕು ತಂದಿದ್ದು, ತನ್ನ ಮರಣಪತ್ರದಲ್ಲಿ ತಮ್ಮ ಜನಾಂಗದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

