ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ,‌ ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರು ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖಂಡೂರಿ ಅವರು ಇಂದು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೇನೆಯಿಂದ ನಿವೃತ್ತರಾದ ಬಳಿಕ ರಾಜಕೀಯಕ್ಕೆ ಬಂದಿದ್ದ ಜನರಲ್ ಖಂಡೂರಿ ಅವರು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಅವರು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡರು. ರಾಜ್ಯದೊಳಗೆ ಪಾರದರ್ಶಕ ಮತ್ತು ಶಿಸ್ತಿನ ಆಡಳಿತಕ್ಕೆ ಅಡಿಪಾಯ ಹಾಕಿದರು. ಜನರಲ್ ಖಂಡೂರಿ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದುಃಖ ವ್ಯಕ್ತಪಡಿಸಿದ್ದು, ಅವರ ನಿಧನವು ರಾಷ್ಟ್ರೀಯ ರಾಜಕೀಯಕ್ಕೆ ತುಂಬಲಾಗದ ನಷ್ಟ ಎಂದು ವಿಷಾದಿಸಿದ್ದಾರೆ.