ಬ್ಯೂನಸ್ ಐರಿಸ್: ಭಾರತದಿಂದ ತಲೆಮರೆಸಿಕೊಂಡಿರುವ ಸ್ವಾಮಿ ನಿತ್ಯಾನಂದನ ಕಪೋಕಲ್ಪಿತ ದೇಶ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ದ ಪ್ರತಿನಿಧಿಗಳೊಂದಿಗೆ ‘ಸಹಕಾರ ಒಡಂಬಡಿಕೆ’ಗೆ ಸಹಿ ಹಾಕಿದ್ದ ಪೆರಗ್ವೆ ಸರ್ಕಾರಿ ಅಧಿಕಾರಿಯನ್ನು ವಜಾಗೊಳಿಸಲಾಗಿದೆ.
ಅಸ್ತಿತ್ವದಲ್ಲೇ ಇರದ ನಿತ್ಯಾನಂದನ ದೇಶದ ಜತೆ ಒಡಂಬಡಿಕೆಗೆ ಸಹಿ ಹಾಕಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೆರಗ್ವೆಯಲ್ಲಿ ದೊಡ್ಡ ಹಗರಣವನ್ನು ಹುಟ್ಟುಹಾಕಿತ್ತು. ನಿತ್ಯಾನಂದನ ಪ್ರತಿನಿಧಿಗಳು ತಾವು ದಕ್ಷಿಣ ಅಮೆರಿಕದ ದ್ವೀಪವಾದ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ದಿಂದ ಬಂದವರು ಎಂದು ಹೇಳಿಕೊಂಡು ಪೆರಗ್ವೆ ಕೃಷಿ ಸಚಿವರ ಸಿಬ್ಬಂದಿ ಮುಖ್ಯಸ್ಥ ಅರ್ನಾಲ್ಡೋ ಚಾಮೊರೊ ಅವರೊಂದಿಗೆ ಒಡಂಬಡಿಕಿಗೆ ಸಹಿ ಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅರ್ನಾಲ್ಡೋ ಚಾಮೊರೊ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.