ಉತ್ತರಪ್ರದೇಶ : ಮನೆ ಟೆರೇಸ್ ಮೇಲೆ ಮಲಗಿದ್ದ ಕುಟುಂಬದ ನಾಲ್ವರು ಸದಸ್ಯರ ಮೇಲೆ ಅಪರಿಚಿತ ವ್ಯಕ್ತಿಗಳು ಆಯಸಿಡ್ ದಾಳಿ ನಡೆಸಿರುವ ಧಾರುಣ ಘಟನೆ ಉತ್ತರಪ್ರದೇಶ ಆಗ್ರಾದ ಶಹಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲಿಹೈ ಪ್ರದೇಶದಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಸಂತ್ರಸ್ತ ಅಸ್ಲಾಂ ತನ್ನ ಹೆಂಡತಿ, ಮಕ್ಕಳು ಮತ್ತು ಸಹೋದರ ಜೊತೆ ಟೆರೇಸ್ ಮೇಲೆ ಮಲಗಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆಸಿಡ್ ದಾಳಿ ನಡೆಸಿದ್ದಾನೆ. ಆಸಿಡ್ ದಾಳಿಯಲ್ಲಿ ಅವರ ಪತ್ನಿ, ಮಕ್ಕಳು ಮತ್ತು ಸಹೋದರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತರ ನೆರೆಮನೆಯ ಕಲ್ಲು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಲು ಮತ್ತು ಆಯಸಿಡ್ ಸಂತ್ರಸ್ತರ ನಡುವೆ ಅನೇಕ ದಿನಗಳಿಂದ ವೈಷಮ್ಯ ನಡೆಯುತ್ತಿದ್ದು, ಇದೇ ಕಾರಣಕ್ಕೆ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಆಗ್ರಾ ಎಸ್ಎಸ್ಪಿ ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.