ಲಖನೌ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಶ್ವಾಸನೆ ನೀಡುವುದನ್ನು ಮುಂದುವರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
‘ಕೋವಿಡ್ ಪಿಡುಗಿನ ಅವಧಿಯಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಹೇಗಿತ್ತು ಎಂದು ಎಲ್ಲರೂ ನೋಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ. ಈ ಹಿನ್ನೆಲೆಯಲ್ಲಿ ಜನರಿಗೆ ಉತ್ತಮ ಹಾಗೂ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕಾಗಿ ನಮ್ಮ ಪಕ್ಷ ಅಧಿಕಾರಿಕ್ಕೆ ಬಂದರೆ, ಚುನಾವಣಾ ಪ್ರಣಾಳಿಕೆ ಸಮಿತಿಯ ಒಪ್ಪಿಗೆಯೊಂದಿಗೆ ₹10 ಲಕ್ಷದವರೆಗೂ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಪಕ್ಷ ನಿರ್ಧರಿಸಿದೆ’ ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಬಾರಾಬಂಕಿಯಲ್ಲಿ ಶನಿವಾರ ಪಕ್ಷದ ‘ಪ್ರತಿಜ್ಞಾ ಯಾತ್ರೆ’ಗೆ ಚಾಲನೆ ನೀಡಿದ್ದ ಅವರು, ರೈತರ ಸಾಲ ಮನ್ನಾ, 20 ಲಕ್ಷ ಜನರಿಗೆ ಉದ್ಯೋಗ ಸಹಿತ ಏಳು ಭರವಸೆಗಳನ್ನು ನೀಡಿದ್ದರು.