ಕಾನ್ಪುರ : ಕೊರೊನಾ ವೈರಸ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಉತ್ತರ ಪ್ರದೇಶದಲ್ಲಿ ಮತ್ತೆ 30 ಝಿಕಾ ವೈರಸ್ ಸೋಂಕಿತರು ಪತ್ತೆಯಾಗಿವೆ.
ಉತ್ತರ ಪ್ರದೇಶದ ಲಕ್ನೋದ ಜಾರ್ಜ್ ವೈದ್ಯಕೀಯ ವಿವಿಯ ವೈರಾಲಜಿ ಲ್ಯಾಬ್ ಮತ್ತು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮತ್ತೆ 30 ಜನರಲ್ಲಿ ಹೊಸದಾಗಿ ಝಿಕಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಸೋಂಕಿತರ ಸಂಖ್ಯೆ 66 ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ ಪತ್ತೆಯಾದ 30 ಸೋಂಕಿತರ ಪೈಕಿ ಮೂವರು ಮಹಿಳೆಯರು, 27 ಜನ ಪುರುಷರಿದ್ದಾರೆ. ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಸ್ ಆಗಿದ್ದು, ಈಡೀಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಅಕ್ಟೋಬರ್ 23 ರಂದು ಕಾನ್ಪುರದ ಭಾರತೀಯ ವಾಯುಪಡೆಯ ಸ್ಟೇಷನ್ ಪ್ರದೇಶದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು.