News Karnataka Kannada
Friday, May 10 2024
ತೆಲಂಗಾಣ

ಹೈದರಾಬಾದ್: ವಿಧಾನಸಭೆ-ಲೋಕಸಭೆ ಚುನಾವಣೆ ಒಟ್ಟಾಗಿ ಎದುರಿಸುತ್ತೇವೆ ಎಂದ ಹೆಚ್.ಡಿ.ಕುಮಾರಸ್ವಾಮಿ

I-T raids will be conducted on opposition parties, says HD Kumaraswamy
Photo Credit : Facebook

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ ʼಭಾರತ್ ರಾಷ್ಟ್ರ ಸಮಿತಿʼ (ಬಿ.ಆರ್.ಎಸ್.) ಜತೆ ಜಾತ್ಯತೀತ ಜನತಾದಳವೂ ಮಿತ್ರಪಕ್ಷವಾಗಿ ಸಕ್ರಿಯವಾಗಿ ಕೆಲಸ ಮಾಡಲಿದೆ ಹಾಗೂ ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಹೈದರಾಬಾದ್ʼನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.) ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (ಬಿ.ಆರ್.ಎಸ್.) ಹೆಸರಿನ್ಲಲಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಣೆ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಬೆಂಗಳೂರಿಗೆ ಹೊರಡುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಮುಂದುವರಿದು ಕುಮಾರಸ್ವಾಮಿ ಅವರು ಹೇಳಿದ್ದು ಇಷ್ಟು;

ಈ ಮೊದಲಿನಿಂದಲೂ ಜೆಡಿಎಸ್ ಮತ್ತು ಟಿಆರ್ ಎಸ್ ಪಕ್ಷಗಳು ಸಹಜ ಮಿತ್ರಪಕ್ಷಗಳಾಗಿದ್ದವು. ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿಕೊಂಡು ಬಂದಿವೆ. ಈಗ ಟಿಆರ್ ಎಸ್ ರಾಷ್ಟ್ರೀಯ ಪಕ್ಷವಾಗಿ ಬಿಆರ್ ಎಸ್ ಹೆಸರಿನಲ್ಲಿ ಹೊರಹೊಮ್ಮಿರುವುದನ್ನು ನಮ್ಮ ಪಕ್ಷ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಕೆಲಸ ಮಾಡುತ್ತೇವೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಆರ್ ಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ *ಬಿಜೆಪಿ-ಕಾಂಗ್ರೆಸ್ ಮುಕ್ತ್ ರಾಜಕೀಯ ವಾತಾವರಣವಿದೆ. ಅದೇ ಸ್ಥಿತಿಯನ್ನು ಕರ್ನಾಟದಲ್ಲೂ ತರಲು ನಾನು ಮತ್ತು ಚಂದ್ರಶೇಖರ್ ರಾವ್ ಅವರೂ ನಿರ್ಧಾರ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಪೂರ್ಣ ಬಹುಮತದ ಸರಕಾರ ರಚನೆ ಮಾಡುವ ಬಗ್ಗೆ ಎರಡೂ ಪಕ್ಷಗಳು ಸದೃಢವಾಗಿ ಕೆಲಸ ಮಾಡಲಿವೆ. ಸಂಪೂರ್ಣ ಬೆಂಬಲ ನೀಡುವುದಾಗಿ ಕೆಸಿಆರ್ ಅವರು ಭರವಸೆ ನೀಡಿದ್ದಾರೆ.

2023ರ ಚುನಾವಣೆಯಲ್ಲಿ ಫಲಿತಾಂಶ ಜೆಡಿಎಸ್ ಪರವಾಗಿ ಬಂದರೆ, ಅದು 2024ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿಯಾಗಲಿದೆ. ಕರ್ನಾಟಕವೂ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ಕರ್ನಾಟಕದಲ್ಲಿ ಕನ್ನಡಿಗರದ್ದೇ ಆದ ಸ್ವಾಭಿಮಾನದ ಸರಕಾರ ತರುವ ನಿಟ್ಟಿನಲ್ಲಿಯೂ ನಾವಿಬ್ಬರೂ ಚರ್ಚೆ ನಡೆಸಿದ್ದೇವೆ. ಅದಕ್ಕೆ ಇವತ್ತಿನ ಕಾರ್ಯಕ್ರಮ ವೇದಿಕೆಯಾಗಿದೆ.

ದೃಢ ನಾಯಕತ್ವದ ಕೆಸಿಆರ್ ಅವರು ತಮ್ಮ ಸಂಕಲ್ಪ ಬಲದಿಂದಲೇ ತೆಲಂಗಾಣದ ಜನರನ್ನು ಒಟ್ಟಾಗಿ ಕರೆದೊಯ್ದು ತೆಲಂಗಾಣ ರಾಜ್ಯವನ್ನು ಸಾಧನೆ ಮಾಡಿದರು. ನಂತರ ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ʼರೈತಬಂಧುʼ, ʼದಲಿತ ಬಂಧುʼದಂತಹ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಸರಕಾರದ ಕಾರ್ಯಕ್ರಮಗಳು ಪ್ರತೀ ನಾಗರಿಕನಿಗೂ ತಲುಪುವಂತೆ ಮಾಡಿದರು. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಮಾಡಿತ್ತು. ಮುಂದಿನ ದಿನಗಳಲ್ಲಿ ಅಂತಹ ಜನಪರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುವುದು.

ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯ ಇತ್ತು. ಕೆಲವೇ ಪಕ್ಷಗಳ ರಾಜಕೀಯ ಏಕಸ್ವಾಮ್ಯತೆಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಹೊಸ ರಾಜಕೀಯ ಶಕ್ತಿ ಬೇಕಿತ್ತು. ಅದಕ್ಕೆ ಬಿಆರ್ ಎಸ್ ಒಂದು ಪ್ತಬಲ ಪರ್ಯಾಯ ಎನ್ನುವುದು ನನ್ನ ಭಾವನೆ.

ಮುಂದಿನ ದಿನಗಳಲ್ಲಿ ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಪಕ್ಷಗಳ ನಾಯಕರು ಬಿಆರ್ ಎಸ್ ಒಕ್ಕೂಟದಲ್ಲಿ ಕೆಲಸ ಮಾಡಲಿವೆ ಎನ್ನುವ ವಿಶ್ವಾಸ ನನಗಿದೆ. ಅಂತಹ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಜೆಡಿಎಸ್-ಬಿಆರ್ ಎಸ್ ಮಿತ್ರಪಕ್ಷಗಳಾಗಿ ಮುನ್ನಡೆಯಲಿವೆ.

ರೈತರು, ದಲಿತರು ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಕೆಸಿಆರ್ ಅವರು ಪರಿಣಾಮ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ತೆಲಂಗಾಣದಲ್ಲಿ ಅಂಥ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಮುಖ್ಯವಾಗಿ ದೇಶದ ಸಂಪತ್ತು ಕೆಲವರಲ್ಲಿಯೇ ಸಂಗ್ರಹವಾಗದೇ ಅದು ಸಮಾನ ಹಂಚಿಕೆ ಆಗಬೇಕು. ಸಾಮಾನ್ಯನಿಗೂ ಆ ಸಂಪತ್ತಿನಲ್ಲಿ ಪಾಲಿರಬೇಕು ಎನ್ನುವ ಗುರಿಯೊಂದಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಕೆಸಿಆರ್ ಅವರು ತಮ್ಮ ರಾಜ್ಯದಲ್ಲಿ ರೈತರಿಗೆ, ದಲಿತರಿಗೆ ಹಾಗೂ ದುರ್ಬಲರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ.

ಬಿಆರ್ ಎಸ್ ಸ್ಥಾಪನೆ ಬಗ್ಗೆ ಈ ಹಿಂದೆಯೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ನನ್ನ ಜತೆ ಕೆಸಿಆರ್ ಅವರು ಸಮಾಲೋಚನೆ ನಡೆಸಿದ್ದರು. ಕೆಲ ದಿನಗಳ ಹಿಂದೆ ಸ್ವತಃ ನಾನೇ ಹೈದರಾಬಾದ್ʼಗೆ ಭೇಟಿ ನೀಡಿ ಚರ್ಚೆ ಮಾಡಿದ್ದೆ. ನಮ್ಮನ್ನು ಪರಿಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಈ ಹೆಜ್ಜೆ ಇರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು