News Karnataka Kannada
Friday, May 17 2024
ಕರ್ನಾಟಕ

ಇಳಿ ವಯಸ್ಸಿನಲ್ಲಿಯೂ ಪರಿಸರ ಕಾಳಜಿ ಮೆರೆಯುತ್ತಿರುವ ತುಳಸಿ ಗೌಡ

Photo Credit :

ಇಳಿ ವಯಸ್ಸಿನಲ್ಲಿಯೂ ಪರಿಸರ ಕಾಳಜಿ ಮೆರೆಯುತ್ತಿರುವ ತುಳಸಿ ಗೌಡ

ಕಾರವಾರ: ಕೇವಲ ಸ್ವಾರ್ಥದ ಪ್ರಚಾರಕ್ಕಾಗಿ ಪರಿಸರದ ಸಂರಕ್ಷಣೆಯ ಕಾಳಜಿ ವ್ಯಕ್ತ ಪಡಿಸುವವರು ಒಂದೆಡೆಯಾದರೆ, ಅರಣ್ಯವನ್ನೇ ಲೂಟಿ ಮಾಡಿ ಹಣ ಮಾಡಿಕೊಳ್ಳುವವರ ನಡುವೆ ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರ, ಸಸ್ಯ ಪ್ರೇಮದಿಂದಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ ತುಳಸಿ ಗೌಡ. 

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಈ ವೃದ್ಧ ಮಹಿಳೆ ಯಾವುದೇ ಲಾಭ, ಪ್ರತಿಫಲದ ನಿರೀಕ್ಷೆ ಇಲ್ಲದೆ ಕೇವಲ ಅರಣ್ಯದ ಮೇಲಿನ ಕಾಳಜಿಗಾಗಿ ಗಿಡ ಮರಗಳನ್ನು ಬೆಳೆಸುವುದರ ಮೂಲಕ ಬರಡಾಗುತ್ತಿರುವ ಕಾಡನ್ನು ಹಸನಾಗಿಸುವ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯವನ್ನು ಕಳೆದ ಆರು ದಶಕಗಳಿಂದ ಮಾಡುತ್ತಿದ್ದಾರೆ.

ಹಾಲಕ್ಕಿ ಸಮುದಾಯಕ್ಕೆ ಸೇರಿದ ತುಳಸಿ ಗೌಡ ಅವರಿಗೆ ಈಗ 70 ವರ್ಷ ವಯಸ್ಸು. ಚಿಕ್ಕ ವಯಸ್ಸಿನಲ್ಲಿಯೇ ಹಸೆಮಣೆ ಏರಿದ ಅವರು ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯವೇ ಉದ್ಯೋಗದ ಜೊತೆಗೆ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ವಾರದಲ್ಲಿ ಐದು ದಿನಗಳ ಕಾಲ ಇಲಾಖೆಯವರು ನೀಡುವ ಕೆಲಸವನ್ನು ಹೊರತು ಪಡಿಸಿ ಉಳಿದ ದಿನವೂ ಸಸ್ಯಗಳನ್ನು ನೆಡುವ ಕಾಯಕವನ್ನು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎನ್ನುವ ದೃಷ್ಟಿಯಲ್ಲಿ ಉಚಿತವಾಗಿ ಮಾಡುತ್ತಿದ್ದಾರೆ.

ನರ್ಸರಿಯಲ್ಲಿ ಬೀಜವನ್ನು ಬಿತ್ತಿ ಅವು ಸಸಿಯಾದ ಬಳಿಕ ಬೋಳಾಗಿರುವ ಕಾಡಿಗೆ ತೆರಳಿ ಅಲ್ಲಿ ನೆಡುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಸವೆಯುತ್ತಿರುವ ತುಳಸಿ ಗೌಡ ಅವರ ದುಡಿಮೆ ಹಾಗೂ ಪ್ರಾಮಾಣಿಕ ಸೇವೆಯನ್ನು ಗಮನಿಸಿ ಅರಣ್ಯ ಇಲಾಖೆ ಇವರ ಸೇವೆಯನ್ನು ಖಾಯಂಗೊಳಿಸಿತು. ಖಾಯಂ ಆದ ಬಳಿಕ 14 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದರು. ಪ್ರಾರಂಭದಿಂದಲೂ ಕಡು ಬಡತನದಲ್ಲೇ ಬೆಳೆದ ಅವರು ಈಗ ಸಿಗುವ ಅಲ್ಪ ಪಿಂಚಣಿಯಿಂದ ಜೀವನ ಸಾಗಿಸುತ್ತಿದ್ದಾರೆ.

ಸುಮಾರು 50 ವರ್ಷಗಳಿಂದ ಬರಡಾಗಿರುವ ಭೂಮಿಯನ್ನು ಹಸನಾಗಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಅವರು ಈವರೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಅವರ ಸೇವೆಯನ್ನು ಗಮನಿಸಿ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಇಂದಿಗೂ ತಮ್ಮ ಇಳಿ ವಯಸ್ಸಿನಲ್ಲಿ ಕಾಯಕ ಮುಂದುವರಿಸಿಕೊಂಡು ಸಾಗುತ್ತಿದ್ದು ಜನರಿಗೆ ಪರಿಸರ ಹಾಗೂ ಮರ-ಗಿಡಗಳ ಮೌಲ್ಯಗಳನ್ನು ತಿಳಿಸುತ್ತಾರೆ.

ವೃಕ್ಷ ಸಂಕುಲದ ಅಪಾರ ಜ್ಞಾನ: ತುಳಸಿ ಗೌಡ ಅವರಿಗೆ ವೃಕ್ಷಜ್ಞಾನ ಅಪಾರವಾಗಿದೆ. ಮುಖ್ಯವಾಗಿ ಸಾಗವಾನಿಯನ್ನೇ ಹೆಚ್ಚಾಗಿ ಬೆಳೆಸುತ್ತಿದ್ದ ಅವರು ಇದರ ಹೊರತಾಗಿ ಬೀಟೆ, ಅತ್ತಿ, ಆಲ, ಹುನಾಲು, ಚೆಳ್ಳೆ, ಹೆಬ್ಬೆಲಸು, ನಂದಿ ಹಾಗೂ ಇನ್ನಿತರ ಮರಗಳ ಮಾಹಿತಿಗಳನ್ನು ಒಳಗೊಂಡಿದ್ದಾರೆ. ಯಾವ ಮರದಿಂದ ಏನೇನು ಪ್ರಯೋಜನ, ಯಾವ ಮರದಲ್ಲಿ ಯಾವಾಗ ಬೀಜ ಒಣಗುತ್ತದೆ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಎಂಬುದರ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗಳಿಗಿಂತ ಹೆಚ್ಚಿನ ಜ್ಞಾನ ಹೊಂದಿದ್ದಾರೆ.

ಸಸಿಗಳ ಉತ್ಪಾದನೆಯಲ್ಲಿ ಇವರಿಗೆ ಇರುವ ಜ್ಞಾನ, ತೋರುವ ಪ್ರಯೋಗಶೀಲತೆ, ಗಿಡ ಮರ ಬೀಜಗಳ ಕುರಿತಾದ ಮಾಹಿತಿ ಅರಣ್ಯ ವಿಜ್ಞಾನಿಗಳನ್ನು ಕೂಡ ಬೆರಗುಗೊಳಿಸುತ್ತಿದೆ. ಜಿಲ್ಲೆಯ ಅಂಕೋಲಾ, ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಇವರು ನೆಟ್ಟು ಬೆಳೆಸಿದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದಿದೆ.

ಒಲಿದು ಬಂದ ಪ್ರಶಸ್ತಿಗಳು: ಸೇವೆಯ ಅವಧಿಯಲ್ಲಿ ತುಳಸಿಯ ಪರಿಸರ ಕಾಳಜಿಯನ್ನು ಗಮನಿಸಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, 1999 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ಇಂಡವಾಳು ಎಚ್ ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಇವರಿಗೆ ದೊರೆತಿವೆ. ಇವರು ನಿವೃತ್ತಿಯ ನಂತರವೂ ತಮ್ಮ ಗಿಡ ನೆಡುವ ಕಾರ್ಯವನ್ನು ಕೈ ಬಿಡಲಿಲ್ಲ. ವಯಸ್ಸಾದಂತೆ ದೂರ ಹೋಗಲು ಕಷ್ಟವಾದಾಗ ತಮ್ಮ ಮನೆಯ ಸುತ್ತಮುತ್ತಲಿನ ಕಾಡಿನಲ್ಲಿಯೇ ಸಸ್ಯ ಸಂಕುಲವನ್ನು ಬೆಳೆಸಿ ಆರೈಕೆ ಮಾಡುತ್ತಿದ್ದಾರೆ.

ತುಳಸಜ್ಜಿ ಎಂದು ಜನಪ್ರಿಯವಾಗಿರುವ ಇವರ ಪರಿಸರ ಪ್ರೇಮದ ಬಗ್ಗೆ ತಿಳಿದು ಅವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಜನರು ಕುಗ್ರಾಮವಾದ ಅಂಕೋಲಾದ ಹೊನ್ನಳ್ಳಿಗೆ ಆಗಮಿಸುತ್ತಾರೆ. ತಮ್ಮನ್ನು ಕಾಣಲು ಬಂದವರನ್ನು ಪ್ರೀತಿಯಿಂದ ಬರಮಾಡಿಕೊಂಡು ಪರಿಸರದ ಬಗ್ಗೆ ವಿಶೇಷ ಕಾಳಜಿಯ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಯುವ ಪೀಳಿಗೆಗೆ ತಿಳಿಸುತ್ತಾರೆ.

ಪರಿಸರ ನಾಶದ ವಿರುದ್ಧ ಆಕ್ರೋಶ: ಇಂದಿನ ಪರಿಸರ ನಾಶದ ಬಗ್ಗೆ ಕಿಡಿ ಕಾರುವ ಇವರು ಭವಿಷ್ಯದಲ್ಲಿ ಇದರಿಂದ ಮುಂದಿನ ಪೀಳಿಗೆಗೆ ಆಗಬಹುದಾದ ತೊಂದರೆಗಳ ಬಗ್ಗೆ ಕಲ್ಪಿಸಿ ದುಃಖ ವ್ಯಕ್ತಪಡಿಸುತ್ತಾರೆ. ತಾವು ಮೊದಲೆಲ್ಲ ಸಾಗುವಾನಿ, ಮಾವು, ಹಲಸು ಮುಂತಾದ ಪರಿಸರ ಪ್ರೇಮಿ ಮರಗಳನ್ನು ಬೆಳೆಸುತ್ತಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಇವರು ಇಂದು ಅರಣ್ಯ ಲೂಟಿ ಹಾಗೂ ಅದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಬಗ್ಗೆ ಜನರು ಜಾಗೃತರಾಗಬೇಕು ಎನ್ನುತ್ತಾರೆ. ಅಲ್ಲದೆ ಅಶುದ್ಧ ವಾತಾವರಣ ನಿರ್ಮಾಣ ಮಾಡುವ ಅಕೇಶಿಯಾ ಬೆಳೆಸುತ್ತಿರುವುದನ್ನು ಸರಿಯಲ್ಲ ಎನ್ನುವುದು ತುಳಸಿ ಗೌಡರ ಅಭಿಪ್ರಾಯವಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು