ಓಡಿಶಾ : ತಾಯಿಯ ಅಂತ್ಯಕ್ರಿಯೆಯಲ್ಲಿ ಹಾಜರಾಗಲು ಸಹೋದರರು ನಿರಾಕರಿಸಿದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರೇ ತಮ್ಮ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಬರೋಬ್ಬರಿ ನಾಲ್ಕು ಕಿಲೋಮೀಟರ್ ದೂರ ಸಾಗಿ ಸ್ಮಶಾನಕ್ಕೆ ತಲುಪಿ ಅಂತ್ಯಕ್ರಿಯೆ ನಡೆಸಿದ ಘಟನೆಯು ಓಡಿಶಾದ ಪುರಿಯಲ್ಲಿ ನಡೆದಿದೆ.
ಭಾನುವಾರಂದು ಪುರಿಯ ಮಂಗಳ ಘಾಟ್ನ ಅಷ್ಟಮಠಾಧೀಶರಾದ ಜಾತಿ ನಾಯಕ್ ನಿಧನರಾಗಿದ್ದರು. ಜಾತಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಆದರೆ ತಾಯಿಯ ಅಂತ್ಯಕ್ರಿಯೆ ನೆರವೇರಿಸಲು ಇಬ್ಬರು ಪುತ್ರರು ನಿರಾಕರಿಸಿದ್ದರು ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಸಂಪ್ರದಾಯಗಳನ್ನು ಮೀರಿ ನಾಲ್ವರು ಪುತ್ರಿಯರೇ ತಮ್ಮ ತಾಯಿಯ ಶವಕ್ಕೆ ಹೆಗಲಾಗಿದ್ದಾರೆ.
ಸ್ಥಳೀಯರ ಸಹಾಯದಿಂದ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತ ನಾಲ್ವರು ಸಹೋದರಿಯರು ಸ್ಮಶಾನಕ್ಕೆ ಸಾಗಿದರು. ತಾಯಿಯ ಶವವನ್ನು ಸ್ಮಶಾನಕ್ಕೆ ತಂದ ಬಳಿಕ ನೆರೆ ಹೊರೆಯವರ ಸಹಾಯದಿಂದ ಅಂತಿಮ ವಿಧಿ ವಿಧಾನಕ್ಕೆ ಸಕಲ ತಯಾರಿ ಮಾಡಿದ್ದಾರೆ. ಬಳಿಕ ತಾವೇ ತಾಯಿಯ ಅಂತ್ಯಕ್ರಿಯೆಯನ್ನು ನಡೆಸಿದರು.