ಕೊಚ್ಚಿ: ವಿದೇಶಗಳಂತೆ ಭಾರತದಲ್ಲಿಯೂ ಕೂಡ ಕೋವಿಡ್ ಮಹಾಮಾರಿ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಅದೇ ರೀತಿ ಕೇರಳದಲ್ಲಿ ಕರೊನಾ ಭೀತಿ ಹೆಚ್ಚುತ್ತಿದ್ದು, ಶನಿವಾರ ನಾಲ್ವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಮತ್ತೊಂದೆಡೆ ಸಕ್ರಿಯ ಪ್ರಕರಣಗಳು 1,324ಕ್ಕೆ ಏರಿಕೆ ಕಂಡಿದ್ದು, ಹೊಸ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ.
ಕೇರಳದಲ್ಲಿ ಪ್ರಸ್ತುತ 1,324 ಜನರು ಕೋವಿಡ್ ಪಾಸಿಟಿವ್ ಆಗಿದ್ದಾರೆ. ಇದು ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣ ಹೊಂದಿದ ರಾಜ್ಯವಾಗಿದೆ. ಪ್ರತಿದಿನ 700ರಿಂದ 1,000 ಮಂದಿಗೆ ಕರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚಿನ ಪರೀಕ್ಷಾ ದರವನ್ನೂ ಕೇರಳ ಹೊಂದಿದೆ.
ಶನಿವಾರ ದೇಶಾದ್ಯಂತ 312 ಕರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 280 ಕೇರಳದಲ್ಲೇ ಪತ್ತೆಯಾಗಿವೆ. ರಾಜ್ಯದಲ್ಲಿ ಜೆಎನ್-1 ಉಪತಳಿ ಪತ್ತೆಯಾಗಿದೆ. ಆದರೆ ಈ ಹಂತದಲ್ಲಿ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ.