ಚಂಡೀಗಢ: ಪಂಜಾಬ್ ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷ ಹಾಗೂ ಎರಡು ಬಾರಿ ಶಾಸಕರಾಗಿದ್ದ ಬೀರ್ ದೇವಿಂದರ್ ಸಿಂಗ್ ಅವರು ಇಂದು (ಜೂನ್.30) ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಪಿಜಿಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಬೀರ್ ದೇವಿಂದರ್ ಸಿಂಗ್ ಅವರು 2003 ಮತ್ತು 2004 ರ ನಡುವೆ ಉಪ ಸ್ಪೀಕರ್ ಆಗಿದ್ದರು.
ಬೀರ್ ದೇವಿಂದರ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಭಗವಂತ್ ಮಾನ್, ಬೀರ್ ದೇವಿಂದರ್ ಸಿಂಗ್ ವಿವಿಧ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ಪಂಜಾಬ್ ಅಭಿವೃದ್ಧಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ನಿಧನವು ತುಂಬಲಾರದ ನಷ್ಟ ಎಂದಿದ್ದಾರೆ. ಬೀರ್ ದೇವಿಂದರ್ ಸಿಂಗ್ ಅವರ ನಿಧನದಿಂದ ನಾವು ವಿಶಿಷ್ಟ ವ್ಯಕ್ತಿತ್ವ, ಉತ್ತಮ ರಾಜಕಾರಣಿ, ಶ್ರೇಷ್ಠ ವಾಗ್ಮಿ ಮತ್ತು ಉತ್ಸಾಹಿ ಬರಹಗಾರರನ್ನು ಕಳೆದುಕೊಂಡಿದ್ದೇವೆ ಎಂದು ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಹೇಳಿದ್ದಾರೆ.