ದೆಹಲಿ: ಗಾಜಿಯಾಬಾದ್ ನಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ ಐದು ಮಂದಿ ಪುರುಷರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ನಂದ್ ನಗ್ರಿ ಪ್ರದೇಶದ ನಿವಾಸಿಯಾದ 38 ವರ್ಷದ ಸಂತ್ರಸ್ತೆ ಆಸ್ಪತ್ರೆಯಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಗೆ ಸಂಪರ್ಕಿಸುವ ಆಶ್ರಮ ರಸ್ತೆಯ ಬಳಿ ಮಹಿಳೆಯೊಬ್ಬರು ಮಲಗಿರುವ ಬಗ್ಗೆ ಗಾಜಿಯಾಬಾದ್ ಪೊಲೀಸರು ಮಂಗಳವಾರ ಮಾಹಿತಿ ಸ್ವೀಕರಿಸಿದ್ದಾರೆ. ನಂತರ ಆ ಸ್ಥಳಕ್ಕೆ ತೆರಳಿದ ಪೊಲೀಸರು ಅಲ್ಲಿದ್ದ ಸಂತೃಸ್ತೆಯನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದು ದೂರು ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ ಸಂತೃಸ್ತ ಮಹಿಳೆಯು ಗಾಜಿಯಾಬಾದ್ನಲ್ಲಿ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ದೆಹಲಿಗೆ ಹಿಂತಿರುಗುತ್ತಿದ್ದಳು. ಆಕೆಯ ಸಹೋದರನ ಜೊತೆ ಬಸ್ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಆಕೆ ಬಸ್ಗಾಗಿ ಕಾಯುತ್ತಿದ್ದಾಗ, ಕಾರೊಂದು ಮಹಿಳೆಯ ಬಳಿಗೆ ಬಂದಿತು. ಆ ಕಾರಿನಲ್ಲಿದ್ದ ಐವರು ಪುರುಷರು ಅವಳನ್ನು ಎಳೆದೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ.