ನವದೆಹಲಿ: ಚಂದ್ರಯಾನ-3 ರ ಎರಡನೇ ಮತ್ತು ಅಂತಿಮ ಡಿ-ಬೂಸ್ಟ್ ಕಾರ್ಯಾಚರಣೆ ಭಾನುವಾರ ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಬುಧವಾರ ಲ್ಯಾಂಡಿಂಗ್ ಆಗುವ ಸಾಧ್ಯತೆ ಇದೆ.
“ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ ಕಾರ್ಯಾಚರಣೆಯು LM ಕಕ್ಷೆಯನ್ನು 25 km x 134 km ಗೆ ಯಶಸ್ವಿಯಾಗಿ ಕಡಿಮೆ ಮಾಡಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್ನಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತಿದೆ. ಆಗಸ್ಟ್ 23, 2023 ರಂದು ಚಂದ್ರನಲ್ಲಿ ಇಳಿಯುವಿಕೆ ಆರಂಭವಾಗಲಿದೆ ಎಂದು ಇಸ್ರೋ ಟ್ವಿಟರ್ ನಲ್ಲಿ ಹೇಳಿದೆ.
ಶುಕ್ರವಾರದ ಮೊದಲ ಡಿ-ಬೂಸ್ಟಿಂಗ್ ಕಾರ್ಯಾಚರಣೆಯ ಸಮಯದಲ್ಲಿ, ಮಾಜಿ ಇಸ್ರೋ ಮುಖ್ಯಸ್ಥ ಕೆ ಶಿವನ್ ಚಂದ್ರಯಾನ -3 ಲ್ಯಾಂಡರ್ನ ವಿನ್ಯಾಸವು ಹಿಂದಿನ ಚಂದ್ರಯಾನ -2 ಮಿಷನ್ನಲ್ಲಿ ರೀತಿಯಲ್ಲಿಯೇ ಇದೆ ಎಂದು ಹೇಳಿದ್ದರು.
“ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಚಂದ್ರಯಾನ-2 ರ ಅವಲೋಕನ ನಡೆಸಿ ಹಿಂದಿನ ಎಲ್ಲಾ ದೋಷಗಳನ್ನು ಸರಿಪಡಿಸಲಾಗಿದೆ” ಎಂದು ಅವರು ಹೇಳಿದ್ದರು. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಕಾಲಿಟ್ಟಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಮನ್ನಣೆ ಪಡೆಯಲಿದೆ.