ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಇಂದು (ಮಾ.16) ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರಿಗೆ ಇಡಿ 11 ಬಾರಿ ಸಮನ್ಸ್ ನೀಡಿತ್ತು. ಆದರೆ ಯಾವುದಕ್ಕೂ ಉತ್ತರ ನೀಡದ ಕೇಜ್ರಿವಾಲ್ ವಿರುದ್ಧ ಇಡಿ ರೂಸ್ ಅವೆನ್ಯೂ ನ್ಯಾಯಾಲಯದ ಮೊರೆ ಹೋಗಿತ್ತು. ಹಾಗಾಗಿ ಕೋರ್ಟ್ ಕೇಜ್ರಿವಾಲ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಹಾಜರಾಗುವಂತೆ ಆದೇಶ ನೀಡತ್ತು. ಈ ಹಿನ್ನಲೆಯಲ್ಲಿ ಕೇಜ್ರಿವಾಲ್ ಇಂದು ಕೋರ್ಟ್ಗೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅವರಿಗೆ ವಿಚಾರಣೆ ನಡೆಸಿ ಜಾಮೀನು ನೀಡಿದೆ.
ಇಂದು ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ನ್ಯಾಯಾಧೀಶರ ಮುಂದೆ ಹಾಜರಾಗುತ್ತಿದ್ದಂತೆ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ಒಪ್ಪಿತು. ಬಳಿಕ ಕೇಜ್ರಿವಾಲ್ ಕೋರ್ಟ್ನಿಂದ ಹೊರ ಬಂದರು. ಇನ್ನು ಕೇಜ್ರಿವಾಲ್ ವಿಚಾರಣೆ ಹಿನ್ನೆಲೆ ಕೋರ್ಟ್ ಮುಂದೆ ಭಾರಿ ಭದ್ರತೆ ಒದಗಿಸಲಾಗಿತ್ತು.
ದೆಹಲಿ ಮದ್ಯದ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಸಮನ್ಸ್ ನೀಡಲಾಗಿತ್ತು. ಈ ಸಮನ್ಸ್ಗೆ ಕೇಜ್ರಿವಾಲ್ ಅವರು ಅವಿಧೇಯರಾಗಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಎರಡು ದೂರುಗಳನ್ನು ಸಲ್ಲಿಸಲಾಗಿತ್ತು. ಆದರೆ ಕೇಜ್ರಿವಾಲ್ ಅವರು ಯಾವುದೇ ಅಸಹಕಾರ ತೋರಿಲ್ಲ ಎಂದು ಅವರು ಪರ ವಕೀಲ ರಮೇಶ್ ಗುಪ್ತಾ ಅವರು ಕೋರ್ಟ್ ಮುಂದೆ ಹೇಳಿದ್ದಾರೆ.