ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟವು ಮುಂದಿನ ಮೂರು ದಿನ ತೀವ್ರ ಕಳಪೆಯಾಗಿರಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮುನ್ಸೂಚನೆ ನೀಡಿದೆ.
ದೆಹಲಿಯ ವಾಯು ಗುಣಮಟ್ಟ ಭಾನುವಾರ ಎಕ್ಯೂಐ 168 ದಾಖಲಾಗಿತ್ತು. ಕೃಷಿ ಭೂಮಿ ಬೆಂಕಿ, ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯ ಹಾಗೂ ಕೆಲವು ಸ್ಥಳೀಯ ಕಾರಣಗಳಿಂದಾಗಿ ವಾಯು ಗುಣಮಟ್ಟ ಮುಂದಿನ ದಿನಗಳಲ್ಲಿ ಮತ್ತಷ್ಟು ಕಳಪೆಯಾಗಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿ ಪಿಎಂ 2.5 ವಾಯು ಗುಣಮಟ್ಟ ದಾಖಲಾಗಿದೆ. ಅಂದರೆ ಸೂಕ್ಷ್ಮ ಕಣಗಳು 2.5 ಮೈಕ್ರೋಮೀಟರುಗಳಿಗಿಂತ ಕಡಿಮೆ ವ್ಯಾಸವುಳ್ಳ ಉಸಿರಿನೊಂದಿಗೆ ಸೇರಬಹುದಾದು. ಇವು ಶ್ವಾಸಕೋಶ ಮತ್ತು ರಕ್ತದ ಹರಿವಿನಲ್ಲಿ ಪ್ರವೇಶಿಸುವ ಸಾಮರ್ಥ್ಯವುಳ್ಳ ಮಾಲಿನ್ಯಕಾರಕ ಕಣಗಳಾಗಿರುತ್ತವೆ.
ಸೆಪ್ಟೆಂಬರ್ ನಿಂದ ಅಕ್ಟೋಬರ್ ಒಳಗೆ ಪಂಜಾಬ್ ಹಾಗೂ ಹರ್ಯಾಣದಲ್ಲಿ ಕೃಷಿ ಭೂಮಿಗೆ ಬೆಂಕಿ ಹಾಕಲಾಗುತ್ತಿದ್ದು, ಮಾಲಿನ್ಯ ದುಪ್ಪಟ್ಟಾಗಿದೆ.