ನವದೆಹಲಿ: ಮೇಡ್ ಇನ್ ಇಂಡಿಯಾ ಕ್ರೇಜ್ ಎಲ್ಲಾ ಕಡೆ ಸೃಷ್ಟಿಯಾಗಿದೆ. ಆಲ್ಕೋಹಾಲ್ ವಿಚಾರದಲ್ಲೂ ಭಾರತ ಹಿಂದೆ ಬಿದ್ದಿಲ್ಲ. ಮೇಡ್ ಇನ್ ಇಂಡಿಯಾ ವಿಸ್ಕಿ ಮಾರಾಟದಲ್ಲೂ ದೇಶ ತನ್ನ ಛಾಪು ಮೂಡಿಸಲು ಆರಂಭಿಸಿದೆ.
ಇದೇ ಮೊದಲ ಬಾರಿಗೆ ದೇಶದಲ್ಲಿ ಸಿಂಗಲ್ ಮಾಲ್ಡ್ ವಿಸ್ಕಿ ಮಾರಾಟದಲ್ಲಿ ದೇಶೀಯ ಕಂಪನಿಗಳು ವಿದೇಶದ ದೈತ್ಯ ಬ್ರ್ಯಾಂಡೆಡ್ ಕಂಪನಿಗಳನ್ನು ಹಿಂದಿಕ್ಕಿದೆ. ಭಾರತೀಯ ಆಲ್ಕೊಹಾಲ್ಯುಕ್ತ ಪಾನೀಯ ಕಂಪನಿಗಳ ಒಕ್ಕೂಟದ ಪ್ರಾಥಮಿಕ ಅಂದಾಜಿನ ಪ್ರಕಾರ, ಸಿಂಗಲ್ ಮಾಲ್ಟ್ಗಳ ಒಟ್ಟು ಮಾರಾಟದಲ್ಲಿ ದೇಶೀಯ ಬ್ರಾಂಡ್ಗಳ ಪಾಲು ಕಳೆದ ವರ್ಷ ಅಂದರೆ 2023 ರಲ್ಲಿ 53 ಪ್ರತಿಶತವನ್ನು ತಲುಪಿದೆ.
ಈ ಅವಧಿಯಲ್ಲಿ, ಒಟ್ಟು 6,75,000 ಕೇಸ್ ಸಿಂಗಲ್ ಮಾಲ್ಟ್ಗಳನ್ನು ದೇಶದಲ್ಲಿ ಮಾರಾಟ ಮಾಡಲಾಗಿದೆ. ಇವುಗಳಲ್ಲಿ, ದೇಶೀಯ ಬ್ರಾಂಡ್ಗಳ ಮಾರಾಟವು 3,45,000 ಕೇಸ್ಗಳಷ್ಟಿದ್ದರೆ, ಸ್ಕಾಟಿಷ್ ಮತ್ತು ಇತರ ವಿದೇಶಿ ಬ್ರ್ಯಾಂಡ್ಗಳ ಮಾರಾಟವು 3,30,000 ಕೇಸ್ಗಳಷ್ಟಿದೆ. ಒಂದು ಕೇಸ್ ಎಂದರೆ, 9 ಲೀಟರ್ ಮದ್ಯ ಎನ್ನುವ ಅಂದಾಜಾಗಿದೆ. ಇನ್ನು ಸಿಂಗಲ್ ಮಾಲ್ಟ್ ಎನ್ನುವುದು ಒಂದೇ ಧಾನ್ಯದಿಂದ ಒಂದೇ ಡಿಸ್ಟಲರಿಯಲ್ಲಿ ತಯಾರಿಸಿದ ಮದ್ಯ ಎನ್ನುವುದಾಗಿದೆ.
ಅಮೃತ್ ಡಿಸ್ಟಿಲರೀಸ್ ನ ಜಂಟಿ ನಿರ್ದೇಶಕ ತ್ರಿವಿಕ್ರಮ್ ನಿಕಮ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಪ್ರತಿದಿನ ಮಾಡಲಾಗುವ ಸಾಧನೆಯಲ್ಲ. ಕೆಲವು ವರ್ಷಗಳ ಹಿಂದೆ ದೇಶೀಯ ವಿಸ್ಕಿ ವಿಚಾರದಲ್ಲಿ ನಮ್ಮನ್ನು ಗೇಲಿ ಮಾಡಲಾಗುತ್ತಿತ್ತು. ಆದರೆ ಈಗ ನಾವು ಗುಣಮಟ್ಟ ಮತ್ತು ಪರಿಷ್ಕರಣೆಯಲ್ಲಿ ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿದ್ದೇವೆ. Glenlivet, Macallan, Lagavulin ಮತ್ತು Talisker ನಂತಹ ಬ್ರ್ಯಾಂಡ್ಗಳು ಈಗ ಅಮೃತ್, ಪಾಲ್ ಜಾನ್, ರಾಂಪುರ್, ಇಂದ್ರಿ ಮತ್ತು ಜ್ಞಾನಚಂದ್ನಂತಹ ಸ್ವದೇಶಿ ಬ್ರಾಂಡ್ಗಳಿಂದ ಸದ್ದಿಲ್ಲದಂತೆ ಆಗಿವೆ’ ಎಂದಿದ್ದಾರೆ.