ಮೆಕ್ಸಿಕೋದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಬಸ್ ಒಂದು 40 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನವಜಾತ ಶಿಶು ಸೇರಿ 27 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೆಕ್ಸಿಕೋದ ದಕ್ಷಿಣ ರಾಜ್ಯವಾದ ಓಕ್ಸಾಕಾದಲ್ಲಿ ಪ್ರಯಾಣಿಕರು ತುಂಬಿದ್ದ ಬಸ್ ಪರ್ವತದ ರಸ್ತೆಯಿಂದ ಜಾರಿ ಬಿದ್ದು ಕಂದಕಕ್ಕೆ ಬಿದ್ದಿದೆ. ಈ ಅವಘಡದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದು, 17ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂಗೊಂಡಿದ್ದು, ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ ಪ್ರಯಾಣಿಕರಿಗೆ ಸಹಾಯ ಮಾಡಿದ್ದಾರೆ. ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, 27 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಗಾಯಗೊಂಡವರನ್ನು ವೈದ್ಯಕೀಯ ಸಹಾಯಕ್ಕಾಗಿ ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಓಕ್ಸಾಕಾದ ರಾಜ್ಯ ಪ್ರಾಸಿಕ್ಯೂಟರ್ ಬರ್ನಾರ್ಡೊ ರೊಡ್ರಿಗಜ್ ಅಲಮಿಲ್ಲಾ AFP ಗೆ ತಿಳಿಸಿದ್ದಾರೆ.