ಭಾರತ ಕೋವಿಡ್ ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದು, ದೇಶದಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಅರ್ಹ ವಯಸ್ಕರು ಎರಡೂ ಡೋಸ್ ಕೊವಿಡ್ -19 ಲಸಿಕೆಯನ್ನು ಪಡೆದಿದ್ದಾರೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದು, ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
“ಭಾರತದ ವ್ಯಾಕ್ಸಿನೇಷನ್ ಅಭಿಯಾನ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದೆ. ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸಲು ಲಸಿಕೆ ಹಂಚಿಕೆಯಲ್ಲಿ ಇದೇ ವೇಗವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ ಮತ್ತು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಇತರ ಕೋವಿಡ್ ನಿಯಮಗಳನ್ನು ಅನುಸರಿಸಬೇಕು” ಎಂದು ಮೋದಿ ಹೇಳಿದ್ದಾರೆ.
“ಅಭಿನಂದನೆಗಳು ಭಾರತ. ಜನಸಂಖ್ಯೆಯಲ್ಲಿ ಶೇ.50ಕ್ಕಿಂತಲೂ ಹೆಚ್ಚು ಅರ್ಹ ವಯಸ್ಕರು ಸಂಪೂರ್ಣವಾಗಿ ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನಾವು ಒಟ್ಟಾಗಿ ಕೊರೋನಾ ವಿರುದ್ಧದ ಯುದ್ಧವನ್ನು ಗೆಲ್ಲುತ್ತೇವೆ” ಎಂದು ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಶನಿವಾರ ಒಂದೇ ದಿನ ದೇಶದಲ್ಲಿ 1.04 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಅದರಲ್ಲಿ 75.12 ಕೋಟಿ ಲಕ್ಷ ಮಂದಿ ಎರಡನೇ ಡೋಸ್ ತೆಗೆದುಕೊಂಡವರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಎರಡೂ ಡೋಸ್ ಪೂರ್ಣಗೊಳಿಸಿದ ಅರ್ಹ ವಯಸ್ಕರ ಪ್ರಮಾಣ ಶೇ.50ಕ್ಕೂ ಹೆಚ್ಚಾಗಿದೆ ಮತ್ತು ಶೇ. 84.8ರಷ್ಟು ಮಂದಿ ಒಂದೇ ಡೋಸ್ ಲಸಿಕೆ ಪಡೆದಿದ್ದಾರೆ.