ಒಮಿಕ್ರಾನ್ ಸೋಂಕಿನ ಭೀತಿ ನಡುವೆ ಇದೀಗ ಕೋವಿಡ್ ಸಾವಿನ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2,796 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 8,895 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,46,33,255ಕ್ಕೆ ಏರಿಕೆಯಾಗಿದೆ. ಈವರೆಗಿನ ಸಕ್ರಿಯ ಸೋಂಕಿತರ ಸಂಖ್ಯೆ 99,155ಗೆ ತಲುಪಿದೆ. ನಿನ್ನೆ ಒಂದೇ ದಿನ 2,796 ಮಂದಿ ಮೃತಪಟ್ಟ ಹಿನ್ನೆಲೆ ಸಾವಿನ ಸಂಖ್ಯೆ 4,73,326ಕ್ಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ಶುಕ್ರವಾರ ದೇಶದಲ್ಲಿ 415 ಮಂದಿ ಸೋಂಕಿತರು ಮೃತಪಟ್ಟಿದ್ದರು. ಈಗ ಒಂದೇ ದಿನದಲ್ಲಿ ಬರೋಬ್ಬರಿ 2ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ಆಘಾತಕಾರಿಯಾಗಿದೆ. ನಿನ್ನೆ 6,918 ಮಂದಿ ಗುಣಮುಖರಾಗಿದ್ದು, ಈವರೆಗೂ ದೇಶದಲ್ಲಿ 3,40,60,774 ಮಂದಿ ಚೇತರಿಸಿಕೊಂಡಿದ್ದಾರೆ.