ಕೋವಿಡ್ ಸೋಂಕಿತ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆ 99 ರಾಷ್ಟ್ರಗಳ ಪ್ರವಾಸಿಗರ ಪ್ರವೇಶಕ್ಕೆ ಭಾರತ ಮುಕ್ತವಾಗಿದೆ.
ಈ ದೇಶಗಳ ಪ್ರವಾಸಿಗರು ಸಂಪೂರ್ಣ ಕೋವಿಡ್ ವಿರುದ್ಧ ಹೋರಾಡುವ ಲಸಿಕೆ ಹಾಕಿಸಿಕೊಂಡಿದ್ದರೆ, ಕ್ವಾರಂಟೈನ್ ಇಲ್ಲದೆಯೂ ಭಾರತಕ್ಕೆ ಪ್ರವಾಸ ಕೈಗೊಳ್ಳಬಹುದಾಗಿದೆ. ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದ 20 ತಿಂಗಳ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಅಮೆರಿಕ, ಬ್ರಿಟನ್, ಯುಎಇ, ಕತಾರ್, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವಾರು ಪ್ರಮುಖ ದೇಶಗಳಿಂದ ಪ್ರವಾಸಿಗರು ಮುಕ್ತವಾಗಿ ಭಾರತಕ್ಕೆ ಬರಬಹುದಾಗಿದೆ. ಭಾರತಕ್ಕೆ ಬಂದ ನಂತರದ 14 ದಿನ ಕಾಲ ತಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಬೇಕೆಂದು ಸರ್ಕಾರವು ಸೂಚಿಸಿದೆ.
ಕೇವಲ ಒಂದು ಡೋಸ್ ಲಸಿಕೆ ಪಡೆದ ವಿದೇಶಿ ಪ್ರಯಾಣಿಕರು, ಭಾರತ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ವರದಿ ಪಾಸಿಟಿವ್ ಬಂದರೆ ಎಂಟು ದಿನ ಕ್ವಾರಂಟೈನ್ ಕಡ್ಡಾಯ.