ಜ.2ರಂದು ಪ್ರಧಾನಿ ಮೋದಿ ಮೀರತ್ ನಲ್ಲಿ 700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿವಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರಧಾನಮಂತ್ರಿ ಕಾರ್ಯಾಲಯ, ಜ.2ರಂದು ಪ್ರಧಾನಿ ಮೋದಿ ಮೀರತ್ ಗೆ ಭೇಟಿ ನೀಡಲಿದ್ದು, ಅಲ್ಲಿನ ಸರ್ಧಾನ ಪಟ್ಟಣದ ಸಲಾವಾ ಹಾಗೂ ಕೈಲಿ ಗ್ರಾಮದಲ್ಲಿ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದೆ.
ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಹೆಸರಿನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳನ್ನು ಹೊಂದಲು ಯೋಜಿಸಲಾಗುತ್ತಿದೆ. ಇದು 540 ಮಹಿಳೆಯರು ಮತ್ತು 540 ಪುರುಷ ಕ್ರೀಡಾಪಟುಗಳು ಸೇರಿದಂತೆ 1,080 ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿರಲಿದೆ.
ಸಿಂಥೆಟಿಕ್ ಹಾಕಿ ಮೈದಾನ, ಫುಟ್ಬಾಲ್ ಮೈದಾನ, ಬಾಸ್ಕೆಟ್ ಬಾಲ್, ವಾಲಿಬಾಲ್, ಹ್ಯಾಂಡಿಬಾಲ್ ಮತ್ತು ಕಬ್ಬಡಿಗಳಿಗೆ ಪ್ರತ್ಯೇಕ ಮೈದಾನಗಳಿರಲಿವೆ. ಲಾನ್ ಟೆನ್ನಿಸ್ ಕೋರ್ಟ್, ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ, ವಿವಿಧೋದ್ದೇಶ ಹಾಲ್ ಮತ್ತು ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ಸಹ ಒಳಗೊಂಡಿದೆ. ಅಷ್ಟೇ ಅಲ್ಲದೆ ವಿವಿಯಲ್ಲಿ ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್ ಲಿಫ್ಟಿಂಗ್, ಆರ್ಚರಿ, ಕ್ಯಾನೀಯಿಂಗ್ ಹಾಗೂ ಕಿಯಾಕಿಂಗ್ ಗಳಿಗೂ ಸೌಲಭ್ಯ ಒದಗಿಸಲಾಗುತ್ತದೆ.