ಕರಾಚಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಸ್ಥಾನವನ್ನು ಶನಿವಾರ ನೆಲಸಮಗೊಳಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್ ಬಂದು ನಿಂತಿತು. ನೋಡನೋಡುತ್ತಿದ್ದಂತೆ ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತು. ಆದರೆ ಹೊರಾವರಣದ ಗೋಡೆಗಳು ಮತ್ತು ಗೇಟ್ ಮಾತ್ರ ಸುಸ್ಥಿತಿಯಲ್ಲಿವೆ. ಅಲ್ಲದೆ ಬುಲ್ಡೋಜರ್ ನಿರ್ವಹಿಸಿದ ತಂಡಕ್ಕೆ ಪೊಲೀಸರು ‘ಪಾಕೀಟು’ ನೀಡುವುದನ್ನು ನೋಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ ಎಂದು ಪಾಕಿಸ್ತಾನದ ಇಂಗ್ಲಿಷ್ ಪತ್ರಿಕೆ ವರದಿ ಮಾಡಿದೆ.
ಮಾರಿ ಮಾತಾ ದೇವಸ್ಥಾನವು ಕರಾಚಿಯ ಮುಖಿ ಚೋಹಿತ್ರಮ್ ರಸ್ತೆಯಲ್ಲಿದ್ದು ಸೋಲ್ಜರ್ ಬಜಾರ್ ಪೊಲೀಸ್ ಠಾಣೆಯ ಬಳಿ ಇದೆ. ಅತ್ಯಂತ ಹಳೆಯ ದೇವಸ್ಥಾನವಾದ ಶ್ರೀ ಪಂಚಮುಖಿ ಹನುಮಾನ್ ಮಂದಿರದ ಶ್ರೀರಾಮನಾಥ ಮಿಶ್ರಾ ಮಹಾರಾಜ್, ‘ಇದು ಅತ್ಯಂತ ಹಳೆಯ ದೇವಾಲಯ. ಕಟ್ಟಡ ತುಂಬಾ ಹಳೆಯದಾಗಿದ್ದರಿಂದ ಯಾವಾಗ ಬೇಕಾದರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಹಾಗಾಗಿ ಆಡಳಿತ ಮಂಡಳಿಯು ಮನಸ್ಸಿಲ್ಲದಿದ್ದರೂ ದೇವಸ್ಥಾನವನ್ನು ನವೀಕರಣಗೊಳಿಸುವತನಕ ಬೇರೊಂದು ಜಾಗದ ಸಣ್ಣಕೋಣೆಗೆ ತಾತ್ಕಾಲಿಕವಾಗಿ ದೇವರ ಮೂರ್ತಿಯನ್ನು ಸ್ಥಳಾಂತರಿಸಿತ್ತು ಎಂದಿದ್ದಾರೆ.