News Karnataka Kannada
Thursday, May 02 2024
ವಿದೇಶ

ನೇಪಾಳದಲ್ಲಿ ಅತಂತ್ರ ಸ್ಥಿತಿ, ಸರ್ಕಾರ ರಚನೆಗೆ ಸಿಕ್ಕಾಪಟ್ಟೆ ಸರ್ಕಸ್

Photo Credit :

ನೇಪಾಳದಲ್ಲಿ ಅತಂತ್ರ ಸ್ಥಿತಿ, ಸರ್ಕಾರ ರಚನೆಗೆ ಸಿಕ್ಕಾಪಟ್ಟೆ ಸರ್ಕಸ್

ನೇಪಾಳದಲ್ಲಿ ರಾಜಕೀಯ ಅಸ್ತಿರತೆ ಮುಂದುವರಿದಿದ್ದು, ಸರ್ಕಾರ ರಚನೆಗೆ ಯಾವುದೇ ಪಕ್ಷವೂ ಅಧಿಕೃತವಾಗಿ ಮುಂದೆ ಬಂದಿಲ್ಲ. ‘ಓಲಿ’ ಸರ್ಕಾರ ವಾಲಿ ಬಿದ್ದು 3 ದಿನ ಕಳೆದರೂ ಎಲ್ಲವೂ ತಟಸ್ಥವಾಗಿದೆ. ನೇಪಾಳ ಅಧ್ಯಕ್ಷೆ ಬಿಡಿಯಾ ದೇವಿ ಈಗಾಗಲೇ ಸರ್ಕಾರ ರಚನೆಗೆ ಗಡುವು ನೀಡಿದ್ದಾರೆ. ಆದ್ರೆ ಗಡುವು ಮುಗಿಯುತ್ತಾ ಬಂದರೂ ಅಧಿಕೃತವಾಗಿ ಯಾವುದೇ ಪಕ್ಷ ಮುಂದೆ ಬಾರದೇ ಇರುವುದು ಚುನಾವಣೆಯ ಮುನ್ಸೂಚನೆ ನೀಡಿದೆ.
ಆದರೆ ತೆರೆಮರೆಯಲ್ಲಿ ನೇಪಾಳ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಸರ್ಕಸ್ ಮುಂದುವರಿಸಿದೆ ಎನ್ನಲಾಗುತ್ತಿದೆ. ಮೇ 10ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ನೇಪಾಳ ಸಂಸತ್‌ನ ಕೆಳಮನೆಯಲ್ಲಿ 275 ಸದಸ್ಯರಿದ್ದು ಈ ಪೈಕಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದ ಕೆ.ಪಿ. ಶರ್ಮಾ ಓಲಿಗೆ ಕನಿಷ್ಠ 136 ಮತಗಳು ಬೇಕಾಗಿದ್ದವು. ಆದರೆ ಓಲಿಗೆ ಸಿಕ್ಕಿದ್ದು 93 ಸಂಸತ್ ಸದಸ್ಯರ ಮತಗಳು.ಈ ಮೂಲಕ ಓಲಿ ಸೋಲು ಕಂಡು, ಓಲಿ ಸರ್ಕಾರ ವಾಲಿಸಿದ್ದಾರೆ. ಓಲಿ ಸೋಲು ಕಂಡ ನಂತರ ನೇಪಾಳ ಸಂವಿಧಾನದ 76 (2)ನೇ ವಿಧಿ ಅನ್ವಯ ಹೊಸ ಸರ್ಕಾರ ರಚಿಸಲು ಅಧ್ಯಕ್ಷೆ ಬಿಡಿಯಾ ದೇವಿ 3 ದಿನಗಳ ಟೈಂ ನೀಡಿದ್ದರು. ಈ ಡೆಡ್‌ಲೈನ್ ಮುಗಿಯುತ್ತಾ ಬಂದಿದ್ದು, ಹೊಸದಾಗಿ ಚುನಾವಣೆ ನಡೆಯುತ್ತಾ ಎಂಬ ಪ್ರಶ್ನೆ ಮೂಡಿದೆ.
ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ನೇಪಾಳದ ಸಂಸತ್‌ಗೆ ಹೊಸದಾಗಿ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ನೇಪಾಳಿ ಕಾಂಗ್ರೆಸ್ ಸರ್ಕಾರ ರಚನೆಗೆ ತೆರೆಮರೆಯ ಪ್ರಯತ್ನ ಆರಂಭಿಸಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಅಧ್ಯಕ್ಷೆ ಬಿಡಿಯಾ ದೇವಿ ಸೂಚನೆ ಹಿನ್ನೆಲೆ ನೇಪಾಳದ ವಿಪಕ್ಷಗಳು ಸರ್ಕಾರ ರಚನೆಗೆ ಮುಂದಾಗಿವೆ. ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ ನೇಪಾಳಿ ಕಾಂಗ್ರೆಸ್‌. ಮತ್ತೊಂದ್ಕಡೆ ನೇಪಾಳಿ ಕಾಂಗ್ರೆಸ್‌ ಸರ್ಕಾರ ರಚನೆಗೆ ಮುಂದಾದರೆ ಬೆಂಬಲ ನೀಡುತ್ತೇವೆ ಎಂದು ಜನತಾ ಸಮಾಜವಾದಿ ಪಕ್ಷ ಮತ್ತು ಸಿಪಿಎನ್‌ ಪಕ್ಷಗಳು ಘೋಷಿಸಿವೆ. ನೇಪಾಳಿ ಕಾಂಗ್ರೆಸ್‌ ಹೇಗೋ ಸರ್ಕಾರ ರಚಿಸಿದರೂ ಬಹುಮತ ಸಿಗುವುದು ಡೌಟ್.
ಅಂದಹಾಗೆ ಓಲಿ ಪ್ರತಿನಿಧಿಸುತ್ತಿದ್ದ ಸಿಪಿಎನ್‌-ಯುಎಂಎಲ್‌ ಹಾಗೂ ಪುಷ್ಪಕಮಲ್‌ ದಹಾಲ್‌ (ಪ್ರಚಂಡ) ನೇತೃತ್ವದ ಸಿಪಿಎನ್‌ (ಮಾವೋವಾದಿ) ಮೈತ್ರಿಕೂಟ ಸರ್ಕಾರವನ್ನ ರಚಿಸಿದ್ದವು. ಆದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪ್ರಚಂಡ ನೇತೃತ್ವದ ಪಕ್ಷ ಹಿಂಪಡೆದಿತ್ತು. ಇಷ್ಟಲ್ಲದೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿರುದ್ಧವೇ ಸರ್ಕಾರದ ಮಿತ್ರಪಕ್ಷಗಳು ರೊಚ್ಚಿಗೆದ್ದಿದ್ದವು. ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಲಾಗಿತ್ತು. ಪ್ರಧಾನಿ ಓಲಿ ಶಿಫಾರಸಿನ ಹಿನ್ನೆಲೆಯಲ್ಲಿ ಅಧ್ಯಕ್ಷೆ ಬಿಡಿಯಾ ದೇವಿ ಭಂಡಾರಿ ಅಧಿವೇಶನ ಕರೆದಿದ್ದರು. ಓಲಿ ಸಂಸತ್‌ ಕೆಳಮನೆಯಲ್ಲಿ ವಿಶ್ವಾಸ ಮತಯಾಚನೆ ಮಾಡಿ ಸೋಲು ಕಂಡಿದ್ದಾರೆ.
2017ರಲ್ಲಿ ನೇಪಾಳ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತ್ತು. ಜಯದೊಂದಿಗೆ ನೇಪಾಳದಲ್ಲಿ ರಾಜಕೀಯ ಸ್ಥಿರತೆ ಆಸೆ ಮತ್ತೆ ಚಿಗುರೊಡೆದಿತ್ತು. ಆದರೆ ಆಡಳಿತರೂಢ ಎನ್‌ಸಿಪಿಯಲ್ಲೇ ಓಲಿ ವಿರೋಧಿಗಳು ಹೆಚ್ಚಳವಾಗಿ, ಓಲಿ ಬೆಂಬಲ ಕಳೆದುಕೊಂಡರು. ನೇಪಾಳಿ ಕಮ್ಯೂನಿಸ್ಟ್ ಪಕ್ಷ(ಎನ್‌ಸಿಪಿ)ವನ್ನು ಬಿಟ್ಟು, ಬಂಡಾಯಗಾರ ಮಾವೋವಾದಿಗಳ ಓಲೈಸುತ್ತಾ ಬಂದ ಆರೋಪದಡಿ ಕೆ.ಪಿ ಶರ್ಮಾ ಓಲಿ ಅವರನ್ನು ಜನವರಿಯಲ್ಲಿ ಉಚ್ಛಾಟನೆ ಮಾಡಲಾಗಿತ್ತು. ಕಮ್ಯೂನಿಸ್ಟ್ ಪಕ್ಷ ಅಧಿಕೃತವಾಗಿ ಈ ಸುದ್ದಿ ಪ್ರಕಟಿಸಿತ್ತು. ಇದಾದ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿತ್ತು.
ಮಹಾಮಾರಿ ಕೊರೊನಾ ಜಗತ್ತನ್ನು ಕಾಡುತ್ತಿರುವಂತೆ ನೇಪಾಳವನ್ನೂ ಕಾಡುತ್ತಿದೆ. ನೇಪಾಳದಲ್ಲಿ ಸುಮಾರು 4 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ, ಸಾವಿರಾರು ಜನ ಪ್ರಾಣಬಿಟ್ಟಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಕೆ.ಪಿ.ಶರ್ಮಾ ಓಲಿ ಕೊರೊನಾ ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಇತ್ತು. ಓಲಿ ಕೊರೊನಾ ಮತ್ತು ಪಕ್ಷ ಎರಡನ್ನೂ ನಿಭಾಯಿಸುವಲ್ಲಿ ಸೋತಿದ್ದಾರೆಂದು ಆರೋಪಿಸಲಾಗಿತ್ತು. ಎಲ್ಲದರ ಪರಿಣಾಮ ಕೆ.ಪಿ.ಶರ್ಮಾ ಓಲಿ ಸಂಸತ್‌ನಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ನೇಪಾಳದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಮೂಡಿದ್ದು, ಕೊರೊನಾ ಕಂಟಕದ ನಡುವೆ ಜನರು ಮತ್ತಷ್ಟು ಗೊಂದಲಕ್ಕೆ ಸಿಲುಕುವಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು