ಇಸ್ಲಾಮಾಬಾದ್ -ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ದುಷ್ಕರ್ಮಿಗಳು ಹಾಳುಗೆಡವಿದ್ದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ.
ರಹೀಮ್ ಯಾರ್ಖಾನ್ ಜಿಲ್ಲೆಯಲ್ಲಿರುವ ಬೋಂಗ್ ಸಿಟಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ಕಳೆದ ವಾರ ದಾಳಿ ಮಾಡಿದ್ದ 100ಕ್ಕೂ ಹೆಚ್ಚು ಮಂದಿ ದೆಗುಲವನ್ನು ಭಗ್ನಗೊಳಿಸಿದ್ದರು.
ಮುಸ್ಲೀಂ ಸಮುದಾಯಕ್ಕೆ ಸೇರಿದ ನೂರಾರು ಮಂದಿ ದೇವಾಲಯವನ್ನು ಭಗ್ನಗೊಳಿಸಿ ಒಂದು ಭಾಗಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ದೇವರ ವಿಗ್ರಹ, ಗೋಡೆ, ಬಾಗಿಲುಗಳನ್ನು ಒಡೆದು ಹಾಕಿದ್ದರು. ಈಗಾಗಲೇ ಕೆಲ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಭಗ್ನಗೊಂಡಿದ್ದ ದೇವಾಲಯವನ್ನು ಪುನರ್ ನಿರ್ಮಿಸಿ ಸ್ಥಳೀಯ ಹಿಂದೂ ಸಮುದಾಯಕ್ಕೆ ದೇವಾಲಯ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸದ್ ಸರ್ಫರಾಜ್ ತಿಳಿಸಿದ್ದಾರೆ.ಪುನರ್ ನಿರ್ಮಿಸಲಾಗಿರುವ ದೇವಾಲಯದಲ್ಲಿ ಹಿಂದೂ ಸಮುದಾಯದವರು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.