ಪೋರ್ಟ್ ಬ್ಲೇರ್: ದ್ವೀಪದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ನೂರಾರು ಪ್ರವಾಸಿಗರು ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಅಂಡಮಾನ್ ದ್ವೀಪ ಸಮೂಹದ ಹ್ಯಾವ್ಲಾಕ್ ದ್ವೀಪದಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಸುಮಾರು 800 ಮಂದಿ ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದ್ದು. ಪ್ರವಾಸಿಗರ ರಕ್ಷಣೆಗಾಗಿ ಭಾರತೀಯ ನೌಕಾಪಡೆಯ ಮೂರು ನೌಕೆಗಳು ಧಾವಿಸಿವೆ. ಸತತ 2 ದಿನಗಳಿಂದ ಹ್ಯಾವ್ಲಾಕ್ ದ್ವೀಪದಲ್ಲಿ ಸುರಿಯುತ್ತಿರುವ ಮಳೆ ಇಂದೂ ಮುಂದುವರೆದಿದ್ದು, ಸಮುದ್ರದಲ್ಲಿ ಉಂಟಾಗಿರುವ ಭಾರಿ ಗಾಳಿ ಚಂಡಮಾರುತವಾಗಿ ಬದಲಾಗುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂಡಮಾನ್ ದ್ವೀಪಸಮೂಹಗಳಲ್ಲೇ ಹ್ಯಾವ್ಲಾಕ್ ದ್ವೀಪ ಅತ್ಯಂತ ಸುಂದರ ಮತ್ತು ವಿಶಾಲ ದ್ವೀಪವಾಗಿದ್ದು, ದ್ವೀಪದಲ್ಲಿನ ಬೀಚ್ ಹಾಗೂ ಪ್ರಕೃತಿ ಸೌಂದರ್ಯ ನೋಡಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ರಜಧಾನಿ ಪೋರ್ಟ್ ಬ್ಲೇರ್ ನಿಂದ ಈ ದ್ವೀಪ ಸುಮಾರು 40 ಕಿ.ಮೀ ದೂರದಲ್ಲಿದೆ. ನೌಕಾಪಡೆಯ ಬಿಟ್ರಾ, ಬಂಗಾರಂ, ಎಲ್ ಸಿಯು38 ಮತ್ತು ಕುಂಭೀರ್ ನೌಕೆಗಳು ಪಯಣ ಬೆಳೆಸಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ.