ವಿಜಯಪುರ : ನಿನ್ನೆ ರಾತ್ರಿ ಸಂಭವಿಸಿದ ಭೀಕರ ಮಳೆ ಮತ್ತು ಗಾಳಿಗೆ ಮನೆಯೊಂದರ ಮೇಲ್ಪಾವಣಿ ಕುಸಿದು ಬಿದ್ದ ಪರಿಣಾಮ, ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಲಮೇಲ ತಾಲೂಕಿನ ಮೊರಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗುರುನಾಥ ಬಡಿಗೇರ (35), ಅವರ ಪತ್ನಿ ಜ್ಯೋತಿ ಬಡಿಗೇರು (28) ಹಾಗೂ ಇಬ್ಬರು ಪುಟ್ಟ ಮಕ್ಕಳಾದ ಕಾಳಮ್ಮ ಬಡಿಗೇರ (13) ಮತ್ತು ಕೀರ್ತಿ ಬಡಿಗೇರ (9) ಎಂದು ಗುರುತಿಸಲಾಗಿದೆ. ಗಾಳಿ ಸಹಿತ ಸುರಿದ ಮಳೆಗೆ ಹಳೆಯ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದಿದ್ದರಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಬಡಿಗೇರ ಕುಟುಂಬವು ತಮ್ಮ ಹಳೆಯ ಬಾಡಿಗೆ ಮನೆಯಲ್ಲಿ ವಾಸವಾಗಲು ಒಂದು ವಿಷಾದನೀಯ ಕಾರಣವಿತ್ತು. ಕುಟುಂಬಸ್ಥರ ಪ್ರಕಾರ, ಇವರು ತಮ್ಮ ಸ್ವಂತ ಮನೆಯ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದರು. ಆ ಕೆಲಸ ಮುಗಿಯುವವರೆಗೆ ತಾತ್ಕಾಲಿಕವಾಗಿ ಈ ಹಳೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಹೊಸ ಮನೆಯ ಕನಸು ನನಸಾಗುವ ಮೊದಲೇ ವಿಧಿ ಕ್ರೂರವಾಗಿ ಇಡೀ ಕುಟುಂಬವನ್ನೇ ಬಲಿಪಡೆದಿದೆ.
ಇನ್ನು ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಹೂತುಹೋಗಿದ್ದ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

