ಉಡುಪಿ: ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ರಾಜಕೀಯ ಹತಾಶೆಯಿಂದ ಮಾಜಿ ಶಾಸಕ ರಘುಪತಿ ಮಾಡಿರುವ ಆಧಾರ ರಹಿತ ಆರೋಪವನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆ ಯಾಚಿಸಬೇಕೆಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್‌ ಕುಲಾಲ್ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಒಡೆತನದ ಖಾಸಗಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಸುಳ್ಳು ಮಾಹಿತಿ ನೀಡಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ಬಗ್ಗೆ ಸ್ಥಳೀಯ ಕರಾವಳಿ ಯುವಕ ಮಂಡಲ ಹಾಗೂ ಊರಿನ ಜನತೆಯ ದೂರಿನಂತೆ ಓರ್ವ ಜವಾಬ್ದಾರಿಯುತ ಶಾಸಕರಾಗಿ ಕಾನೂನು ಪ್ರಕಾರ ಕ್ರಮವಹಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ 3 ಬಾರಿ ಶಾಸಕರಾಗಿರುವ ರಘುಪತಿ ಭಟ್ ರಾಜಕೀಯ ಪ್ರೇರಿತರಾಗಿ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ರಘುಪತಿ ಭಟ್ಟರಿಗೆ ಹಿಂದುಳಿದ ವರ್ಗದ ಸಾಮಾನ್ಯ ಕಾರ್ಯಕರ್ತರನ್ನು ಶಾಸಕನಾಗಿ ಒಪ್ಪುವ ಮನಸ್ಥಿತಿ ಇಲ್ಲ.ಹಿಂದೂ ಕಾರ್ಯಕರ್ತನಾಗಿ, ರಾಷ್ಟ್ರೀಯವಾದಿ ಚಿಂತನೆಗಳ ಮೂಲಕ ಹಂತ ಹಂತವಾಗಿ ಬೆಳೆದು, ಉಡುಪಿ ನಗರಸಭೆಯ ಸದಸ್ಯರಾಗಿ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಯುವ ಸಹಕಾರಿ ನಾಯಕರಾಗಿ ಮುಖಂಡರಾಗಿ, ಕರಾವಳಿ ಜಿಲ್ಲೆಯ ಮೀನುಗಾರ ಮುಖಂಡರಾಗಿ, ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಓರ್ವ ಹಿಂದುಳಿದ ವರ್ಗಗಳ ಸಾಮಾನ್ಯ ಕಾರ್ಯಕರ್ತ ಪಕ್ಷದ ಹಿರಿಯರ ಸೂಚನೆಯ ಮೇರೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದರೂ ಯಶ್ ಪಾಲ್ ಸುವರ್ಣ ರನ್ನು ಶಾಸಕರಾಗಿ ರಘುಪತಿ ಭಟ್ ಇನ್ನೂ ಒಪ್ಪಿಲ್ಲ.

ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಶಾಸಕರು ಎಂದೂ ಮಾಡಿಲ್ಲ. ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಅನುದಾನಗಳ ಕೊರತೆಯ ನಡುವೆಯೂ ಹಗಲಿರುಳು ಶ್ರಮಿಸುತ್ತಾ, ಪಕ್ಷದ ಕಾರ್ಯಕರ್ತರ ಬೇಡಿಕೆ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ರಾಷ್ಟ್ರೀಯತೆ ಹಿಂದುತ್ವದ ವಿಚಾರದಲ್ಲಿ ಎಂದಿಗೂ ರಾಜಿಯಾಗದೇ ಪಕ್ಷದ ಹಿರಿಯರ, ಕಾರ್ಯಕರ್ತರ ಹಾಗೂ ಉಡುಪಿ ಕ್ಷೇತ್ರದ ಜನತೆಯ ಘನತೆಗೆ ಧಕ್ಕೆಯಾಗದಂತೆ ಓರ್ವ ಜವಾಬ್ದಾರಿಯುತ ಶಾಸಕರಾಗಿ ಯಶ್ ಪಾಲ್ ಸುವರ್ಣ ಕಾರ್ಯ ವೈಖರಿ ಬಗ್ಗೆ ಹೆಮ್ಮೆ ಇದೆ ಎಂದರು.

ಅಧಿಕಾರ ಅನುಭವಿಸಿ ಪಕ್ಷ ದ್ರೋಹ ಮಾಡಿದ ವ್ಯಕ್ತಿಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ:

ಬಿಜೆಪಿ ಪಕ್ಷದಿಂದ 3 ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿ, ಕಳೆದ ಚುನಾವಣೆಯಲ್ಲಿ ಸೀಟು ನೀಡಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಅಧಿಕಾರದ ಲಾಲಸೆಯಿಂದ ತನಗಾಗಿ ಹಗಲಿರುಳು ದುಡಿದ ಕಾರ್ಯಕರ್ತರನ್ನು ನಡು ನೀರಲ್ಲಿ ಕೈಬಿಟ್ಟು, ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದು ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಪಕ್ಷದ ಹಿರಿಯರ ಮನವಿಗೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಿಗೂ ಗೌರವ ನೀಡದ ರಘುಪತಿ ಭಟ್ ರಿಗೆ ಶಾಸಕರ ಕಾರ್ಯವೈಖರಿ, ಪಕ್ಷ ನಿಷ್ಠೆ ಹಾಗೂ ಬದ್ಧತೆಯ ಬಗ್ಗೆ ಟೀಕಿಸುವ ನೈತಿಕತೆ ಉಳಿದಿಲ್ಲ.

ಶಾಸಕ ಯಶ್ ಪಾಲ್ ಸುವರ್ಣ ವಿರುದ್ದ ನಿರಂತರವಾಗಿ ತೇಜೋವಧೆಗೆ ಮುಂದಾಗುತ್ತಿರುವ ರಘುಪತಿ ಭಟ್, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಒತ್ತಡ ಹಾಕುತ್ತಿದ್ದಾರೆ ಎಂಬ ಬಾಲಿಶ ಅಧಾರ ರಹಿತ ಆರೋಪ ಮಾಡಿ ಸಮಾಜದ ಮುಂದೆ ಶಾಸಕರನ್ನು ರೌಡಿಯ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜು ಕುಲಾಲ್, ಜಗದೀಶ್‌ ಆಚಾರ್ಯ, ಪ್ರದೀಪ್ ಹೊನ್ನಾಳ, ಶ್ರೀವತ್ಸ, ಮನೋಜ್ ಶೆಟ್ಟಿ ಉಪಸ್ಥಿತರಿದ್ದರು.