ಬೆಂಗಳೂರು: ಮೂವರು ವೈದ್ಯರು ಜನದಟ್ಟಣೆಯ ರಸ್ತೆಯಲ್ಲಿ ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಜಯದೇವ ಜಂಕ್ಷನ್ ಮತ್ತು ಬಿಟಿಎಂ ಲೇಔಟ್ ನಡುವೆ ಈ ಘಟನೆ ನಡೆದಿದೆ. ದಟ್ಟವಾದ ಟ್ರಾಫಿಕ್ನಲ್ಲಿ ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಾ ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ರಸ್ತೆಯನ್ನು ಝಿಗ್-ಜಾಗ್ ರೀತಿಯಲ್ಲಿ ಚಾಲನೆ ಮಾಡಿದ್ದರು.
ಬಂಧಿತರನ್ನು ಧನುಷ್ ಎಸ್, ಅಪೂರ್ವ ಮತ್ತು ಅವಿನಾಶ್ ಎಂದು ಗುರುತಿಸಿದ್ದಾರೆ, ಎಲ್ಲರೂ ಮೂಳೆಚಿಕಿತ್ಸಾ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಧನುಷ್ ಚಿಕ್ಕಬಾಣಾವರದಲ್ಲಿರುವ ಸಪ್ತಗಿರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಅಪೂರ್ವ ವೈದೇಹಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅವಿನಾಶ್ ಕರ್ನಾಟಕದ ರಾಮನಗರ ಜಿಲ್ಲೆಯ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಸೋಮವಾರ ಮೂವರನ್ನು ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಕರೆತರಲಾಯಿತು, ಅಲ್ಲಿ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

