ಉಡುಪಿ: ಉದ್ಯೋಗದ ಅವಕಾಶಗಳು ಎದುರಾದರೂ ಸ್ವಂತ ಊರು, ಮಣ್ಣು ಹಾಗೂ ಕೃಷಿಯ ಮೇಲಿನ ಪ್ರೀತಿಯಿಂದ ಕೃಷಿಯಲ್ಲೇ ಹೊಸ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡಿದ್ದಾರೆ ಶಂಕರಪುರದ ಪಾಂಬೂರು ನಿವಾಸಿ ಇಗ್ನೇಷಿಯಸ್ ಡಿ’ಸೋಜಾ.

ಮಲ್ಲಿಗೆ ಕೃಷಿಯಿಂದ ಆರಂಭವಾದ ಅವರ ಕೃಷಿ ಪಯಣ, ಬಳಿಕ ಮಿಶ್ರ ಕೃಷಿಯತ್ತ ವಿಸ್ತರಿಸಿದೆ. ಕುಟುಂಬದ ಹಿರಿಯರಿಂದ ಬಂದ ಜಮೀನಿನಲ್ಲಿ ಮಲ್ಲಿಗೆ ಹಾಗೂ ಭತ್ತದ ಕೃಷಿಯೊಂದಿಗೆ ಆಡು, ಕೋಳಿ ಮತ್ತು ಮೀನು ಸಾಕಾಣಿಕೆಯನ್ನೂ ಕೈಗೊಂಡಿದ್ದಾರೆ. ಇದರ ಜೊತೆಗೆ ಶಂಕರಪುರದ ಮಣ್ಣಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಸುವ ಪ್ರಯೋಗವನ್ನೂ ನಡೆಸಿದ್ದು, ಉತ್ತಮ ಫಲಿತಾಂಶ ಕಂಡಿದ್ದಾರೆ.

ಮಲ್ಲಿಗೆ ಕೃಷಿಗೆ ಹೆಸರುವಾಸಿಯಾಗಿರುವ ಶಂಕರಪುರದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಸುವ ಮೂಲಕ ಇಲ್ಲಿನ ಮಣ್ಣಿನಲ್ಲೂ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಒಂದೇ ಕೃಷಿಯ ಮೇಲೆ ಅವಲಂಬಿತರಾಗದೆ ವಿವಿಧ ಬೆಳೆ ಹಾಗೂ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಿಕೊಂಡಿರುವುದು ಅವರ ಕೃಷಿಯ ವಿಶೇಷತೆ. ಕೃಷಿಯಿಂದ ಯುವಕರು ದೂರ ಸರಿಯುತ್ತಿರುವ ಸಂದರ್ಭದಲ್ಲಿ, ಹೊಸ ಪ್ರಯೋಗ ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ಕೃಷಿಯಲ್ಲಿಯೇ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಅವರು ತಮ್ಮ ಅನುಭವದ ಮೂಲಕ ತೋರಿಸಿದ್ದಾರೆ.

‘ನಮ್ಮ ಮಣ್ಣಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇತ್ತು. ಕೃಷಿಯನ್ನು ಬಿಡಬಾರದು ಎಂಬ ಕಾರಣಕ್ಕೆ ಬೇರೆ ಬೇರೆ ಕೃಷಿ ಪ್ರಯೋಗಗಳನ್ನು ಮಾಡುತ್ತಿದ್ದೇವೆ’ ಎಂದು ಇಗ್ನೇಷಿಯಸ್ ಡಿ’ಸೋಜಾ ತಿಳಿಸಿದ್ದಾರೆ.

ಕೃಷಿಯ ಮಹತ್ವವನ್ನು ಮಕ್ಕಳಿಗೂ ತಿಳಿಸಬೇಕು ಎಂಬ ಉದ್ದೇಶದಿಂದ ಇಗ್ನೇಷಿಯಸ್ ದಂಪತಿ ಕುಟುಂಬ ಸಮೇತ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಣ್ಣಿನೊಂದಿಗೆ ನಂಟು ಬೆಳೆಸಿಕೊಂಡು, ಕೃಷಿಯಲ್ಲಿ ಹೊಸತನ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂಬ ಸಂದೇಶವನ್ನು ಅವರ ಕೃಷಿ ಬದುಕು ನೀಡುತ್ತದೆ.