ಉಡುಪಿ: ನ್ಯಾಯಾಲಯದಲ್ಲಿ ಆರೋಪಿಯೊಬ್ಬನಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಅದನ್ನು ನೈಜ ದಾಖಲೆ ಎಂಬಂತೆ ಹಾಜರುಪಡಿಸಿ ವಂಚನೆಗೆ ಯತ್ನಿಸಿದ ಆರೋಪದಡಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಉಮ್ಮರ್ ಫಾರೂಕ್ ಬಂಟ್ವಾಳ ಹಾಗೂ ನಿಶಾಂತ್ ಕುಮಾರ್ ಮಂಗಳೂರು ಬಂಧಿತ ಆರೋಪಿಗಳು. ಆರೋಪಿಗಳು ಮತ್ತೊಬ್ಬರ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು, ಕೆ.ಟಿ. ಮೊಹಮ್ಮದ್ ಅವರ ಹೆಸರು ಹಾಗೂ ವಿಳಾಸವನ್ನು ನಕಲಿಯಾಗಿ ನಮೂದಿಸಿ ದಾಖಲೆ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ಮೇಲಾಧಿಕಾರಿಗಳ ಸೂಚನೆಯಂತೆ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರತ್ನಾಕರ ಕೆ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗಿತ್ತು. ಎಎಸ್‌ಐ ಲೋಕೇಶ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಸಂತೋಷ್, ಜಗನ್ನಾಥ್ ನಾಯ್ಕ್, ಪೊಲೀಸ್ ಸಿಬ್ಬಂದಿ ಆನಂದ್, ಆನಂದಯ್ಯ, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ, ಹೇಮಂತ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.