ಉಡುಪಿ: ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಕಾಪುವಿನ ಶ್ರೀ ಹಳೇ ಮಾರಿಗುಡಿ , ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿ (ಕಲ್ಯ)ಯಲ್ಲಿ ನಡೆಯುವ ಎರಡು ದಿನಗಳ ಸುಗ್ಗಿ ಮಾರಿಪೂಜೆ ಬುಧವಾರ ಸಂಜೆ ವೈಭವದಿಂದ ಸಂಪನ್ನಗೊಂಡಿತು.
ಕಣ್ಮನ ಸೆಳೆಯುತ್ತಿದ್ದ ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಮೂರೂ ಮಾರಿಗುಡಿಗಳಲ್ಲಿ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸಿ ಮಹೋತ್ಸವದಲ್ಲಿ ಭಾಗಿಯಾದರು. ಮಂಗಳವಾರ ರಾತ್ರಿ ಕಾಪು ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನದಿಂದ, ಕಾಪು ಹೊಸ ಮಾರಿಗುಡಿ ಮತ್ತು ಕಾಪು ಮೂರನೇ (ಕಲ್ಯ) ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸಾಂಕೇತಿಕ ಮೂರ್ತಿ ಮತ್ತು ಆಭರಣಗಳನ್ನು ಮೆರವಣಿಗೆಯ ಮೂಲಕ ತರಲಾಯಿತು.
ಸಂಪ್ರದಾಯದಂತೆ ಆ ಸಾಂಕೇತಿಕ ಮೂರ್ತಿಯನ್ನು ಮಾರಿ ಪೂಜೆಗೆಂದೇ ಹೊಂಗಾರು ಮರದಲ್ಲಿ ಕೆತ್ತಿದ ಮೂರ್ತಿಗೆ ಬದಲಿಸಿ ಗದ್ದುಗೆ ಪ್ರತಿಷ್ಠಾಪನೆ ನಡೆಸಲಾಯಿತು. ನಾನಾ ಧಾರ್ಮಿಕ ಅನುಷ್ಠಾನಗಳೊಂದಿಗೆ ರಾತ್ರಿ ಮಾರಿ ಪೂಜಾ ಮಹೋತ್ಸವ ನಡೆಯಿತು.
ಬುಧವಾರ ಮಧ್ಯಾಹ್ನದ ಪೂಜೆಯ ಬಳಿಕ ಸಂಜೆಯವರೆಗೆ ದರ್ಶನ ಸೇವೆ ನಡೆಯಿತು. ಸಂಜೆ ದೇವಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಹೋಗಿ ಮಲ್ಲಾರಿನಲ್ಲಿರುವ ನಿಗದಿತ ಸ್ಥಳದಲ್ಲಿ ವಿಸರ್ಜಿಸುವುದರೊಂದಿಗೆ ಮಾರಿಪೂಜೆ ಮಹೋತ್ಸವ ಸಂಪೂರ್ಣಗೊಂಡಿತು.
ಸುಗ್ಗಿ ಮಾರಿ ಪೂಜೆಯ ಪ್ರಯುಕ್ತ ಮೂರು ಮಾರಿಗುಡಿಗಳ ಪರಿಸರದಲ್ಲಿ 200ಕ್ಕೂ ಅಧಿಕ ವಿವಿಧ ಮಾರಾಟ ಮಳಿಗೆಗಳು, ಅಂಗಡಿ-ಸ್ಟಾಲ್ ಗಳನ್ನು ಹಾಕಲಾಗಿತ್ತು. ಈ ಪೈಕಿ ಮಾರಿಯಮ್ಮ ದೇವಿಗೆ ಅತ್ಯಂತ ಪ್ರಿಯವಾಗಿರುವ ಮಲ್ಲಿಗೆ, ಹಿಂಗಾರ, ಹಣ್ಣು ಕಾಯಿ ಸಮರ್ಪಣೆ ಸಹಿತ ವಿವಿಧ ಅಂಗಡಿಗಳಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ವ್ಯಾಪಾರ ಜೋರಾಗಿತ್ತು.

