ಗ್ಯಾಂಗ್ಟಾಕ್: ಭಾರೀ ಮಳೆಯಿಂದಾಗಿ ಉತ್ತರ ಸಿಕ್ಕಿಂನ ಚುಂಗ್ಥಾಂಗ್‌ನ ಹಲವೆಡೆ ಭೂಕುಸಿತಗಳು ಸಂಭವಿವೆ. ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಚುಂಗ್ಥಾಂಗ್-ಲಾಚೆನ್ ಮಾರ್ಗದಲ್ಲಿ ಭೂಕುಸಿತಗಳು ಸಂಭವಿಸಿವೆ. ಇದರಿಂದಾಗಿ ಲಾಚೆನ್‌ಗೆ ತೆರಳುತ್ತಿದ್ದ ಪ್ರವಾಸಿಗರು ದಾರಿ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಂಗನ್ ಜಿಲ್ಲಾ ಕಲೆಕ್ಟರ್ ಅನಂತ್ ಜೈನ್ ಹೇಳಿದ್ದಾರೆ. ಸಿಲುಕಿಕೊಂಡ ಪ್ರವಾಸಿಗರಿಗೆ ಚುಂಗ್ಥಾಂಗ್‌ನಲ್ಲಿರುವ ಐಟಿಬಿಪಿ ಶಿಬಿರ ಮತ್ತು ಗುರುದ್ವಾರದಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ರಸ್ತೆ ತೆರವು ಹಾಗೂ ಸರಿಪಡಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರ್ಗಗಳನ್ನು ಸುರಕ್ಷಿತವೆಂದು ಘೋಷಿಸಿದ ನಂತರವೇ ಪ್ರಯಾಣಕ್ಕೆ ಅವಕಾಶ ನೀಡಬಹುದು ಎಂದು ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸುತ್ತಲೇ ಕೆಲವು ಪ್ರವಾಸಿಗರು ಗ್ಯಾಂಗ್ಟಾಕ್‌ಗೆ ಹಿಂತಿರುಗಿದ್ದಾರೆ ಮತ್ತು ಅವರ ಪ್ರಯಾಣ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ನಿರ್ಬಂಧಿಸಲಾದ ಲಾಚುಂಗ್‌ಗೆ ಹೋಗುವ ರಸ್ತೆಯನ್ನು ತೆರವುಗೊಳಿಸಲಾಗಿದೆ ಮತ್ತು ಆ ಕಡೆಯಿಂದ ಬಂದ ಪ್ರವಾಸಿಗರನ್ನು ಬುಧವಾರ ಬೆಳಗ್ಗೆ ಸುರಕ್ಷಿತವಾಗಿ ಗ್ಯಾಂಗ್ಟಾಕ್‌ಗೆ ಕಳುಹಿಸಲಾಗಿದೆ.

ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದಿಂದಾಗಿ ತ್ಸೊಮ್ಗೊ ಮತ್ತು ನಾಥುಲಾದಂತಹ ಪ್ರಮುಖ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.