News Karnataka Kannada
Sunday, May 05 2024
ತುಮಕೂರು

ಕ್ರೀಡಾಂಗಣದ ಜವಾಬ್ದಾರಿ ವಹಿಸಿಕೊಳ್ಳಲು ಮೀನಾಮೇಷ: ಕ್ರೀಡಾಪಟುಗಳಿಂದ ಆಕ್ರೋಶ

Lazy to take charge of the stadium: Athletes
Photo Credit : News Kannada

ತುಮಕೂರು: ಕಳೆದ ಒಂದು ತಿಂಗಳ ಹಿಂದೆ ಉದ್ಘಾಟನೆಗೊಂಡ ನೂತನ ಮಹಾತ್ಮಗಾಂಧಿ ಕ್ರೀಡಾಂಗಣದ ಜವಾಬ್ದಾರಿ ತೆಗೆದುಕೊಳ್ಳಲು ಸ್ಮಾರ್ಟ್‌ಸಿಟಿ ಮತ್ತು ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಮೀನಾ ಮೇಷ ಎಣಿಸುತ್ತಿರುವ ಪರಿಣಾಮ ಕ್ರೀಡಾಪಟುಗಳು ಹಲವಾರು ಸಮಸ್ಯೆಗಳನ್ನು ಎದುರಿಸುತಿದ್ದು,ಕ್ರೀಡಾ ಇಲಾಖೆಯ ನಿರ್ಲಕ್ಷಕ್ಕೆ ಕ್ರೀಡಾಪಟುಗಳು ಮತ್ತು ಕ್ರೀಡಾಪ್ರೋತ್ಸಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಜರಗಬೇಕು.ಇದಕ್ಕಾಗಿ ಅಂತರಾಷ್ಟ್ರಿಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಹಳೆಯ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ನೆಲಸಮಗೊಳಿಸಿ, ಸ್ಮಾರ್ಟ್‌ಸಿಟಿಯ ಸುಮಾರು ೫೮-೬೨ ಕೋಟಿ ಅನುದಾನದಲ್ಲಿ ಹೊಸದಾಗಿ ಕ್ರೀಡಾಪಟುಗಳಿಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಕ್ರೀಡಾಂಗಣ ನಿರ್ಮಾಣಗೊಂಡಿದೆ.ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡ ಸುಮಾರು ಎಂಟು ತಿಂಗಳ ಬಳಿಕ ಉದ್ಘಾಟನೆ ನೆರವೇರಿ,ಕ್ರೀಡಾಪುಟಗಳು ಅಭ್ಯಾಸದಲ್ಲಿ ತೊಡಗಿದ್ದರು.

ಮಹಾತ್ಮಗಾಂಧಿ ಕ್ರೀಡಾಂಗಣ ಉದ್ಘಾಟನೆಗೊಂಡು ಒಂದು ತಿಂಗಳು ಕಳೆದರೂ ಇದುವರೆಗೂ ಕ್ರೀಡಾಂಗಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರು ಮುಂದಾಗುತ್ತಿಲ್ಲ. ಇದರಿಂದಾಗಿ ಸಮರ್ಪಕ ನಿರ್ವಹಣೆ ಇಲ್ಲದೆ,ನಿರ್ವಹಣೆಗೆ ತಗುಲುವ ವೆಚ್ಚ ಭರಿಸಲಾಗದೆ ಇಂದೋ,ನಾಳೆಯೋ ಕ್ರೀಡಾಂಗಣವನ್ನು ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ ನೀಡದೆ ಮುಚ್ಚಲು ಮುಂದಾಗಿದ್ದಾರೆ. ಕಳೆದ ಒಂದು ತಿಂಗಳ ವಿದ್ಯುತ್ ಬಿಲ್ ಸುಮಾರು ೧.೯೦ ಲಕ್ಷ ರೂ ಬಂದಿದೆ. ಇದನ್ನು ಯಾರ ಭರಿಸಬೇಕು ಎಂಬ ಗುತ್ತಿಗೆದಾರ ಮತ್ತು ಇಲಾಖೆಯ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.

ಅಥ್ಲೇಟಿಕ್ ಮತ್ತು ಪುಟ್‌ಬಾಲ್‌ಗೆಂದು ನಿರ್ಮಾಣಗೊಂಡಿರುವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಲ್ಲದವರು ಸಿಂಥಟಿಕ್ ಟ್ರಾಕ್‌ನಲ್ಲಿ ವಾಯುವಿಹಾರ ನಡೆಸುತ್ತಿದ್ದು, ಸಣ್ಣ,ಪುಟ್ಟ ಮಕ್ಕಳು ಟ್ರಾಕ್ ಮೇಲೆ ಆಟವಾಡಲು ಬಿಡುವುದರಿಂದ ವಿಶೇಷವಾಗಿ ಅಥ್ಲೇಟಿಕ್ ಅಭ್ಯಾಸ ಮಾಡುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಯಾರನ್ನು ಟ್ರಾಕ್‌ಗೆ ಬಿಡಬೇಕು. ಯಾರನ್ನು ವಾಕಿಂಗ್ ಪಾಥ್‌ಗೆ ಬಿಡಬೇಕು ಎಂಬುದನ್ನು ಇಲಾಖೆಯವರು ನಿರ್ವಹಿಸಬೇಕು. ಕ್ರೀಡಾಪಟುಗಳು ಹೇಳಿದರೆ ನಮ್ಮನ್ನೇ ಗದರಿಸುತ್ತಾರೆ ಎಂಬುದು ಕ್ರೀಡಾಪಟುಗಳ ಅಸಮಾಧಾನವಾಗಿದೆ.

ಈ ಕುರಿತು ಮಾತನಾಡಿದ ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್, ಸರಕಾರ ಸುಮಾರು ೬೦-೬೫ ವೆಚ್ಚದಲ್ಲಿ ನಿರ್ಮಾಣ ಮಾಡಿದ ಕ್ರೀಡಾಂಗಣದ ಉದ್ದೇಶವೇ ಈಡೇರುತ್ತಿಲ್ಲ.ಇಲ್ಲಿ ಅಭ್ಯಾಸಕ್ಕೆ ಬರುವವರಿಗೆ ಕುಡಿಯಲು ನೀರಿಲ್ಲ. ಶೌಚಾಲಯಕ್ಕೆ ಬೀಗ ಹಾಕಲಾಗಿದೆ.  ಸ್ತ್ರೀಯರು ಸಹ ಸಿಂಥಟಿಕ್ ಟ್ರಾಕ್ ಮೇಲೆ ವಾಕಿಂಗ್ ಮಾಡುವುದರಿಂದ ಅಥ್ಲೇಟ್‌ಗಳ ಅಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಕ್ರೀಡಾ ಇಲಾಖೆಗೆ ಶೀಘ್ರವೇ ಕ್ರೀಡಾಂಗಣವನ್ನು ವಶಕ್ಕೆ ಪಡೆದು,ನಿರ್ವಹಣಾ ಸಮಿತಿ ರಚಿಸಿ, ಸೂಕ್ತ ವ್ಯವಸ್ಥೆ  ಮಾಡದಿದ್ದರೆ, ಕ್ರೀಡಾಪಟುಗಳೊಂದಿಗೆ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ, ಸುಂದರವಾಗಿ ನಿರ್ಮಾಣಗೊಂಡಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸೌಲಭ್ಯಗಳ ಕೊರತೆ ಇದೆ. ಕ್ರೀಡಾಪಟುಗಳಿಗೆ ಅಗತ್ಯವಿರುವ ಕ್ರೀಡಾಪರಿಕರಗಳಿಲ್ಲ. ಜಿಮ್‌ಗೆ ತರಿಸಿದ್ದ ಉಪಕರಣಗಳು ಏನಾಗಿವೆ  ಎಂದು ಗೊತ್ತಿಲ್ಲ. ಹಗಲಿರುಳು ಕ್ರೀಡಾಪಟುಗಳು ಹೋರಾಟ ಮಾಡಿದ ಪರಿಣಾಮ ಉದ್ಘಾಟನೆ ಗೊಂಡ ಕ್ರೀಡಾಂಗಣದ ಉದ್ದೇಶವೇ ಈಡೇರಿಲ್ಲ ಎಂದರು.

ಹೋರಾಟಗಾರ ಪಿ.ಎನ್.ರಾಮಯ್ಯ ಮಾತನಾಡಿ ,ಬೆಳಗ್ಗೆ ಸಂಜೆ ಕ್ರೀಡಾಂಗಣಕ್ಕೆ ಅಭ್ಯಾಸಕ್ಕೆ ಬರುವ ಕ್ರೀಡಾಪಟುಗಳಿಗೆ ಕುಡಿಯುವ ನೀರಿಗೂ ಗತಿಯಿಲ್ಲ. ಅಭ್ಯಾಸದ ನಂತರ ಬಟ್ಟೆ ಬದಲಿಸಲು ರೂಮ್ ವ್ಯವಸ್ಥೆಇಲ್ಲ. ಕೂಡಲೇ ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ಸಭೆ ನಡೆಸಿ, ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲಿ ಕ್ರೀಡಾಪಟುಗಳೊಂದಿಗೆ ನಾವು ಸಹ ಪ್ರತಿಭಟನೆಗೆ ಸಿದ್ದ ಎಂದರು.

ವಿವೇಕಾನಂದ ಕ್ರೀಡಾ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಮಾತನಾಡಿ,ಕ್ರೀಡಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಕ್ರೀಡಾಪಟುಗಳ ಸ್ಥಿತಿ.ಇನ್ನೇನು ನಮ್ಮ ಸಮಸ್ಯೆ ಬಗೆಹರಿಯಿತು ಎನ್ನುವಾಗ ಗುತ್ತಿಗೆದಾರರು ನಿರ್ವಹಣೆಯ ಭಯದಿಂದ ಬೀಗ ಹಾಕುವ ಮಾತುಗಳನ್ನಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸತತವಾಗಿ ಜನಪ್ರತಿನಿಧಿಗಳು,ಸ್ಮಾರ್ಟ್‌ಸಿಟಿ ಅಧಿಕಾರಿಗಳ ಹಿಂದೆ ಬಿದ್ದು ಉದ್ಘಾಟನೆ ಮಾಡಿಸಿದರೂ ಪ್ರಯೋಜನಕ್ಕೆ ಬಾರದಿರುವುದು ನಿಜಕ್ಕೂ ವಿಷಾದದ ಸಂಗತಿ ಎಂದರು.

ಅಂತರರಾಷ್ಟ್ರೀಯ ಅಥ್ಲೇಟ್ ಋಷಿಕ್ ತಂದೆ ಮಂಜುನಾಥ್ ಮಾತನಾಡಿ, ಸುಂದರವಾಗಿ ನಿರ್ಮಾಣಗೊಂಡಿರುವ ಕ್ರೀಡಾಂಗಣವನ್ನು ವಶಕ್ಕೆ ತೆಗೆದುಕೊಳ್ಳಲು ಇಲಾಖೆ ಹಿಂದೆ,ಮುಂದೆ ನೋಡುತ್ತಿದೆ. ಇದರ ಪರಿಣಾಮ ಗುತ್ತಿಗೆದಾರರು ನಿರ್ವಹಣೆ ಸಾಧ್ಯವಿಲ್ಲ ಬೀಗ ಹಾಕುತ್ತೇವೆ ಎನ್ನುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಅಭ್ಯಾಸಕ್ಕೆ ಜಾಗವಿಲ್ಲದೆ ಪರದಾಡುತ್ತಿದ್ದ ಕ್ರೀಡಾಪಟುಗಳು ಈಗಷ್ಟೇ ಅಭ್ಯಾಸ ಆರಂಭಿಸಿದ್ದಾರೆ. ಇಂತಹ ವೇಳೆಯಲ್ಲಿ ಮುಚ್ಚುವ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲಾಡಳಿತ ಕೂಡಲೇ ಮದ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕೆಂದರು.

ಈ ವೇಳೆ ಕ್ರೀಡಾಪಟುಗಳಾದ ನಾಗರಾಜು ಸೇರಿದಂತೆ ಹಲವರು ಮಹಾತ್ಮಗಾಂಧಿ ಕ್ರೀಡಾಂಗಣದ ಅವ್ಯವಸ್ಥೆ ಕುರಿತು ಮಾತನಾಡಿದ್ದು, ಕ್ರೀಡಾ ಇಲಾಖೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು