News Karnataka Kannada
Sunday, April 28 2024
ವಿಶೇಷ

ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾದ ದಾಖಲೆಗಳ ಸರದಾರ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ

Viratkohl
Photo Credit : Twitter

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಿದೆ. ಆ ಮೂಲಕ 1983, 2003, 2011ರ ನಂತರ 4ನೇ ಬಾರಿಗೆ ಪ್ರಶಸ್ತಿಗೆ ಅರ್ಹತೆ ಪಡೆದಿದೆ. 140 ಭಾರತೀಯರ ಕನಸಿಗೆ ಇನ್ನೊಂದೇ ಹೆಜ್ಜೆ ಬಾಕಿದೆ. ನ್ಯೂಜಿಲೆಂಡ್ ಎದುರು 2019ರ ಸೆಮಿಫೈನಲ್​​ ಸೋಲಿನ ಸೇಡು ತೀರಿಸಿಕೊಂಡ ಭಾರತ, 12 ವರ್ಷಗಳ ನಂತರ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ. ಇತ್ತ ಟೀಂ ಇಂಡಿಯಾ ದಾಖಲೆಗಳ ಸುರಿಮಳೆಗೈಯುತ್ತಿದೆ. ಇನ್ನು ಈ ಅಪೂರ್ವ ಸಾಧನೆ ಯುವ  ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ.

ಆಧುನಿಕ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟರ್​ ವಿರಾಟ್ ಕೊಹ್ಲಿ ಅವರು ‘ಭಾರತದ ಕ್ರಿಕೆಟ್​ ದೇವರು’ ಸಚಿನ್​ ತೆಂಡೂಲ್ಕರ್ ಶತಕಗಳ ದಾಖಲೆ ಮುರಿದ್ದಾರೆ. ವಿರಾಟ್ ಈಗ ಏಕ ದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಅವರು ತಮ್ಮ 50ನೇ ಶತಕ ಬಾರಿಸಿದ್ದಾರೆ. ವಿಶ್ವ ಕಪ್ ಟೂರ್ನಿಯಲ್ಲೇ ಅವರು ಸಚಿನ್ ದಾಖಲೆಯ ಮುರಿದು ಗರಿಷ್ಠ ಏಕದಿನ ಶತಕಗಳ ದಾಖಲೆ ಬರೆದ ಅವರು ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರುವುದು ವಿಶೇಷವಾಗಿದೆ. ಇದೇ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೆರಡು ದಾಖಲೆಗಳನ್ನು ಮಾಡಿದ್ದಾರೆ. ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

ಇಲ್ಲಿ ಇನ್ನೊಂದು ವಿಶೇಷವೆಂದರೆ, ತನ್ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರು​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮತ್ತು ವಿದಾಯ ಘೋಷಿಸಿದ ದಿನವೇ ವಿರಾಟ್ ಕೊಹ್ಲಿ 50 ಶತಕಗಳ ಮೈಲಿಗಲ್ಲು ತಲುಪಿದ್ದಾರೆ.

ಈ ಹಾದಿಯಲ್ಲಿ ಅವರು ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೇ, ಅತ್ಯಧಿಕ ರನ್‌ ಗಳಿಕೆಯಲ್ಲೂ ದಾಖಲೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್​ ಅವರು ವಿಶ್ವಕಪ್​ ಆವೃತ್ತಿಯೊಂದರಲ್ಲಿ 11 ಪಂದ್ಯಗಳನ್ನು ಆಡಿ 673 ರನ್​ ಬಾರಿಸಿದ್ದರು. ಇದು ಈವರೆಗೆ ವಿಶ್ವಕಪ್​ನ ದಾಖಲೆಯಾಗಿಯೇ ಉಳಿದಿತ್ತು. ಈ ದಾಖಲೆಯನ್ನೂ ಕೊಹ್ಲಿ ಮುರಿದಿದ್ದಾರೆ. ಹಾಲಿ ಆವೃತ್ತಿಯ ವಿಶ್ವಕಪ್​ನಲ್ಲಿ ಸದ್ಯ 674* ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಹೊಸ ತಲೆಮಾರಿನ ಕ್ರಿಕೆಟ್‌ನ ಶ್ರೇಷ್ಠ ಎನಿಸಿರುವ ವಿರಾಟ್ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿರುವುದು ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಪುಳಕವನ್ನುಂಟು ಮಾಡಿದೆ.

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೊಹ್ಲಿ 106 ಎಸೆತಗಳಲ್ಲಿ ಶತಕ ಪೂರೈಸಿದರು. 98 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಬೌಲಿಂಗ್‌ನಲ್ಲಿ ಚೆಂಡನ್ನು ಬ್ಯಾಕ್‌ವರ್ಡ್ ಸ್ವ್ಕೇರ್-ಲೇಗನತ್ತ ಬಾರಿಸಿ 2 ರನ್ ಗಳಿಸಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಪೂರೈಸಿದರು. ಆ ಮೂಲಕ ತಮ್ಮ ಆರಾಧ್ಯ ದೈವ ಸಚಿನ್ ಸಮ್ಮುಖದಲ್ಲೇ ಈ ಸಾಧನೆ ಮಾಡಿದ್ದು ವಿಶೇಷ. ಇದೇ ವೇಳೆ ಹೆಲ್ಮೆಟ್ ಮತ್ತು ಗ್ಲೌಸ್‌ ತೆಗೆದು ಶಿರಬಾಗಿ ಸಚಿನ್ ಅವರಿಗೆ ನಮಿಸಿರು. ಸಚಿನ್ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವವನ್ನು ಸ್ವೀಕರಿಸಿದರು.

35 ವರ್ಷದ ವಿರಾಟ್ ಅವರು, ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಅಚ್ಚಳಿಯ ಪ್ರಭಾವನ್ನು ಬೀರುತ್ತಿದ್ದಾರೆ. ಐಪಿಎಲ್‌ನಲ್ಲೂ ರನ್‌ಗಳ ರಾಶಿಯನ್ನು ಪೇರಿಸಿದ್ದಾರೆ. ನಿಜಕ್ಕೂ ಅವರು ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿಯಾಗಿ ಹೊರ ಹೊಮ್ಮಿದ್ದಾರೆ. ಕ್ರಿಕೆಟ್ ಅಂಗಣದಲ್ಲಿನ ದಾಖಲೆಗಳಿಂದ ಮಾತ್ರವಲ್ಲದೇ ಅವರು ಅಂಗಣದಾಚೆಗೂ ತೋರಿರುವ ಸಂಯಮ, ವಿನಯವಂತಿಕೆಯ ಸದ್ಗುಣಗಳು ಅವರನ್ನು ಶ್ರೇಷ್ಠರ ಸಾಲಿಗೆ ಸೇರಿಸಿವೆ.

ಕೇವಲ ಬ್ಯಾಟಿನಿಂದ ಮಾತ್ರವಲ್ಲದೇ ಆಟದ ಸರ್ವಮಯ ಹಾಗೂ ಆಟದ ಆಚೆಗಿನ ಬದುಕಿನಿಂದಾಗಿಯೂ ವಿರಾಟ್ ಶ್ರೇಷ್ಠರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ವಿರಾಟ್ ಈಗ ನೀಡುತ್ತಿರುವ ಪ್ರದರ್ಶನವನ್ನು ಗಮನಿಸಿದರೆ ಇನ್ನೂ ಐದಾರು ವರ್ಷ ಅವರು ಅಗ್ರ ಕ್ರಿಕೆಟ್ ಆಟವಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲಿಯವರೆಗೆ ಅವರ ಬ್ಯಾಟಿನಿಂದ ಇನ್ನಷ್ಟು ದಾಖಲೆಗಳು ಹೊರ ಹೊಮ್ಮುವುದಂತು ಸತ್ಯ.

ವಿರಾಟ್ ಕೊಹ್ಲಿ ಆಟಕ್ಕೆ ಜಗತ್ತಿನ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿವರೆಗೆ ಹಲವರು ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನರೇಂದ್ರ ಮೋದಿ ಎಕ್ಸ್‌ ನಲ್ಲಿ ಇಂದು, ವಿರಾಟ್ ಕೊಹ್ಲಿ ಅವರು ಕೇವಲ ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿರುವುದು ಮಾತ್ರವಲ್ಲ ಅತ್ಯುತ್ತಮ ಕ್ರೀಡಾ ಮನೋಭಾವವನ್ನು ವ್ಯಾಖ್ಯಾನಿಸುವ ಶ್ರೇಷ್ಠತೆ ಮತ್ತು ಪರಿಶ್ರಮದ ಮನೋಭಾವವನ್ನು ಸಹ ಪ್ರದರ್ಶಿಸಿದ್ದಾರೆ. ಈ ಗಮನಾರ್ಹ ಮೈಲಿಗಲ್ಲು ಅವರ ನಿರಂತರ ಸಮರ್ಪಣೆ ಮತ್ತು ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ನಾನು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಮುಂದಿನ ಪೀಳಿಗೆಗೆ ಮಾದರಿಯಾಗುವುದನ್ನು ಮುಂದುವರಿಸಲಿ ಎಂದು ಪ್ರಧಾನಿ ಮೋದಿ ಕೊಹ್ಲಿ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಅವರು, ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ನನ್ನ ಪಾದಗಳನ್ನು ಮುಟ್ಟುವಂತೆ ಇತರ ತಂಡದ ಸದಸ್ಯರು ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದರೆ ಶೀಘ್ರದಲ್ಲೇ, ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯವನ್ನು ಮುಟ್ಟಿದ್ದೀರಿ. ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ
ಖುಷಿಯಾಗಿದೆ. ಒಬ್ಬ ಭಾರತೀಯ ನನ್ನ ದಾಖಲೆಯನ್ನು ಮುರಿದಿದ್ದಕ್ಕೆ ನಾನು ಹೆಚ್ಚು ಸಂತೋಷಪಡುತ್ತೇನೆ. ವಿಶ್ವಕಪ್ ಸೆಮಿ-ಫೈನಲ್‌ನಂತಹ ದೊಡ್ಡ ವೇದಿಕೆಯಲ್ಲಿ ಇದನ್ನು ಮಾಡಿರುವುದಕ್ಕೆ ಇನ್ನೂ ಸಂತೋಷವಿದೆ ಎಂದು ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್‌ನ ಫುಟ್‌ಬಾಲ್ ತಾರೆ ಡೇವಿಡ್ ಬೆಕ್‌ಹ್ಯಾಮ್ ಕೊಹ್ಲಿ ಶತಕವನ್ನು ಶ್ಲಾಘಿಸಿದ್ದಾರೆ. ಸರಿಯಾದ ಸಮಯದಲ್ಲಿ ನಾನು ಭಾರತದಲ್ಲಿದ್ದೇನೆ, ದೀಪಾವಳಿ ಸಂಭ್ರಮವನ್ನು ನೋಡಿದ್ದೇನೆ, ಈಗ ವಿರಾಟ್ ಕೊಹ್ಲಿ 50ನೇ ಶತಕವನ್ನು ನೋಡಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಗೂಗಲ್ ಇಂಡಿಯಾ ಕೂಡ ಕೊಹ್ಲಿ ಶತಕವನ್ನು ಸಂಭ್ರಮಿಸಿದ್ದು, ಇಂದು ನಗಲು ನೂರು ಕಾರಣಗಳಿವೆ ಎಂದು ಕೊಹ್ಲಿ ಶತಕವನ್ನು ಶ್ಲಾಘಿಸಿದೆ.

ಪತ್ನಿ ಅನುಷ್ಕಾ ಶರ್ಮಾ ಕೂಡ ವಿರಾಟ್ ಕೊಹ್ಲಿ ದಾಖಲೆಯನ್ನು ಕೊಂಡಾಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಂಚಿಕೊಂಡಿರುವ ಅನುಷ್ಕಾ ನೀನು ದೇವರ ಮಗು ಎಂದು ಬರೆದುಕೊಂಡಿದ್ದಾರೆ. “ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್. ನನಗೆ ನಿಮ್ಮ ಪ್ರೀತಿಯ ಆಶೀರ್ವಾದ ಸಿಕ್ಕಿರುವ ಜೊತೆಗೆ ವಿರಾಟ್ ಕೊಹ್ಲಿಯ ಪ್ರೀತಿ ಕೂಡ ದೊರೆತಿರುವುದಕ್ಕೆ ಕೃತಜ್ಞನಾಗಿದ್ದೇನೆ. ಮುಂಬರುವ ದಿನಗಳಲ್ಲಿ ವಿರಾಟ್​ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಗಳಿಸಿ, ಬೆಳವಣಿಗೆ ಹೊಂದಲಿ. ನೀವು ನಿಜವಾಗಿಯೂ ದೇವರ ಮಗು” ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು