ಮುಂಬೈ: 2026 ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ಸಂಭ್ರಮಾಚರಣೆ ವೇಳೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಕೀಲರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.

ಮಾ.8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ ಜಯಗಳಿಸಿತ್ತು. ಈ ವೇಳೆ ನಡೆದ ಸಂಭ್ರಮಾಚರಣೆ ಸಮಯದಲ್ಲಿ ಪಾಂಡ್ಯ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪುಣೆ ಮೂಲದ ವಕೀಲ ವಾಜಿದ್ ಖಾನ್ ಬಿಡ್ಕರ್ ಅವರು ಮಹಾರಾಷ್ಟ್ರದ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹೀಕಾ ಅವರೊಂದಿಗೆ ರಾಷ್ಟ್ರಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿರುವ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆ ಪಾಂಡ್ಯ ರಾಷ್ಟ್ರಧ್ವಜವನ್ನು ಬೆನ್ನಿಗೆ ಸುತ್ತಿಕೊಂಡು ವೇದಿಕೆಯ ಮೇಲೆ ಮಲಗಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ವಾಜಿದ್ ಖಾನ್ ಬಿಡ್ಕರ್, ಹಾರ್ದಿಕ್ ಪಾಂಡ್ಯ ವಿಜಯೋತ್ಸವದ ಸಂಭ್ರಮದಲ್ಲಿ ತನ್ನ ಗೆಳತಿಯೊಂದಿಗೆ ಡ್ಯಾನ್ಸ್ ಮಾಡುತ್ತಿದ್ದರು. ರಾಷ್ಟ್ರಧ್ವಜವನ್ನು ಅವರ ಬೆನ್ನಿಗೆ ಕಟ್ಟಲಾಗಿತ್ತು. 1971 ರ ರಾಷ್ಟ್ರೀಯ ಧ್ವಜ ಕಾಯ್ದೆಯ ಸೆಕ್ಷನ್ 2 ರ ಪ್ರಕಾರ, ನಾವು ರಾಷ್ಟ್ರಧ್ವಜದ ಘನತೆಯನ್ನು ಗೌರವಿಸಬೇಕು. ಆದಾಗ್ಯೂ, ಹಾರ್ದಿಕ್ ಪಾಂಡ್ಯ ತಮ್ಮ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ತುಂಬಾ ಕಳೆದುಹೋಗಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.

— Veena Jain (@Vtxt21) March 9, 2026