ನಂಜನಗೂಡು: ಬ್ಯಾಂಕ್ ಗಳಲ್ಲಿ ಖಾತೆದಾರರು ಉಳಿತಾಯ ಖಾತೆ ತೆರೆದಿದ್ದಾರೆ. ಆದರೆ, ಉಳಿತಾಯ ಮಾಡುತ್ತಿಲ್ಲ, ಇದರಿಂದ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಹುಟ್ಟಿದ ಒಂದು ತಿಂಗಳ ಮಗುವಿಗೂ ಬ್ಯಾಂಕ್ ಖಾತೆ ತೆರೆಯಲಾಗುತ್ತಿದೆ ಎಂದು ತಗಡೂರು ಭಾರತೀಯ ಸ್ಟೇಟ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೆ.ಆರ್ ಶ್ಯಾಮ್ ಸುಂದರ್ ತಿಳಿಸಿದರು.
ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ತಗಡೂರು ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತರಿಗಾಗಿ ಸಂಧ್ಯಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ತಗಡೂರಿನ ಸ್‌ಬಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಕೆ. ಆರ್ ಶ್ಯಾಮಸುಂದರ್ ಮಾತನಾಡಿ, ಎಸ್ ಬಿ ಐ ಬ್ಯಾಂಕ್ ನಿಮ್ಮ ಕುಟುಂಬದ ಬ್ಯಾಂಕ್ ಆಗಿದ್ದು, ರೈತರಿಗಾಗಿ ವಿವಿಧ ಯೋಜನೆಯಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮತ್ತು ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ ಸ್ವ ಉದ್ಯೋಗ ಸ್ಥಾಪಿಸಿಕೊಳ್ಳಲು ಆಹಾರ ಸಂಸ್ಕರಣೆ, ಆಹಾರ ಉತ್ಪಾದನೆ, ಟೈಲರಿಂಗ್ ಮತ್ತು ಹಾಲು ಉತ್ಪಾದಕರಿಗೂ ಸಾಲ ಸೌಲಭ್ಯ ಸಿಗಲಿದೆ. ಕೆಎಸ್ಆರ್ ಯೋಜನೆಯಲ್ಲಿ ಬಾಳೆ, ಅಡಿಕೆ, ಕಬ್ಬು, ತೆಂಗು, ಅರಿಶಿನ ಬೆಳೆಗಳಿಗೆ ಎಕರೆಗೆ ಸುಮಾರು 60 ರಿಂದ 80 ಸಾವಿರದವರೆಗೆ ಸಾಲ ನೀಡಲಾಗುತ್ತದೆ.
ಅಲ್ಲದೆ ಕೃಷಿ ಸಮೃದ್ಧಿ ರಿನ್ ಯೋಜನೆಯಿಂದ ಎಕರೆಗೆ ಕನಿಷ್ಠ 2.5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಸರ್ಕಾರದಿಂದ ಸುಕನ್ಯ ಸಮೃದ್ಧಿ ಯೋಜನೆ, ಆರೋಗ್ಯ ವಿಮೆ, ಅಪಘಾತ ವಿಮೆ ಸೇರಿದಂತೆ ಲೈಫ್ ಇನ್ಶೂರೆನ್ಸ್ ಮಾಡಲಾಗುತ್ತದೆ. ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಉಳಿತಾಯ ಖಾತೆಯನ್ನು ತೆರೆಯಬೇಕು. ಮಗು ಜನಿಸಿದ ಒಂದು ತಿಂಗಳ ನಂತರ ಪ್ರತಿ ಮಗುವಿನ ಉಳಿತಾಯ ಖಾತೆಯನ್ನು ತೆರೆಯಬೇಕು ಇದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ಸಹಾಯವಾಗಲಿದೆ.
ತಾಯಿ ಮತ್ತು ಮಗುವಿನ ಜಂಟಿ ಖಾತೆಯನ್ನು ತೆರೆದಾಗ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಬ್ಯಾಂಕ್ ಗಳಿಂದ ಈಗಾಗಲೇ ಸಾಲವನ್ನು ಮರುಪಾವತಿ ಮಾಡಲು ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಸುಸ್ಥಿದಾರು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ತಾಪಂ ಉಪಾಧ್ಯಕ್ಷ ಸಿಎಂ ಮಹದೇವಯ್ಯ, ಗ್ರಾಪಂ ಮಾಜಿ ಸದಸ್ಯ ಡಿಎಂ ಮಹದೇವ್, ಎಸ್ ಬಿಐ ಮುಖ್ಯ ವ್ಯವಸ್ಥಾಪಕ ಜಿತೇಂದ್ರಕುಮಾರ್, ಪ್ರಾದೇಶಿಕ ವ್ಯವಸ್ಥಾಪಕ ಮಧು, ತಗಡೂರು ಎಸ್ ಬಿಐ ಶಾಖಾ ವ್ಯವಸ್ಥಾಪಕ ಕೆ.ಆರ್ ಶ್ಯಾಮಸುಂದರ್, ಸಿಬ್ಬಂದಿಗಳಾದ ಮಹದೇವಸ್ವಾಮಿ, ಪಿ.ಶಶಿಕುಮಾರ್, ಹೆಚ್.ಎಸ್ ಸರ್ವೇಶ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಳಪತಿ ಮಹದೇವಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಮಹದೇವಪ್ಪ, ಮುಖಂಡರಾದ ಮಲ್ಲುಸ್ವಾಮಿ, ಮಲ್ಲಣ್ಣಬುದ್ದಿ, ಡೈರಿ ಮಹದೇವಪ್ಪ, ನಾಗಯ್ಯ, ಪ್ರಭುಸ್ವಾಮಿ ಸೇರಿದಂತೆ ರೈತರು ಹಾಜರಿದ್ದರು.

