Bengaluru 22°C
Ad

ಕೊಹ್ಲಿ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ‘ಹಿಟ್‌ಮ್ಯಾನ್’

Vk Rohith

ಮುಂಬೈ:  ಜೂನ್‌ 29 ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಅತೀವ ಖುಷಿ ಮತ್ತು ದುಖಃ ಎರಡನ್ನೂ ಅನುಭವಿಸುವ ಅವಕಾಶ. ಒಂದು ಕಡೆ 13 ವರ್ಷಗಳ ಬಳಿಕ ಭಾರತ ಐಸಿಸಿ ಟ್ರೋಫಿ ಗೆದ್ದರೆ ಮತ್ತೊಂದು ಕಡೆ ಇಬ್ಬರು ದಿಗ್ಗಜರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

Ad
300x250 2

ಭಾರತ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಇದೇ ನನ್ನ ಕೊನೆಯ ಟಿ20 ವಿಶ್ವಕಪ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳುವ ಮೂಲಕ ಗೆಲುವಿನ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಮೊದಲ ಶಾಕ್ ಕೊಟ್ಟರು. ಕಿಂಗ್ ಕೊಹ್ಲಿ ವಿದಾಯ ಹೇಳಿದ ಬೆನ್ನಲ್ಲೇ ನಾಯಕ ರೊಹಿತ್ ಶರ್ಮಾಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿ ಅಭಿಮಾನಿಗಳಿಗೆ ಮತ್ತೊಂದು ಆಘಾತ ಕೊಟ್ಟರು. ರೋಹಿತ್ ಶರ್ಮಾ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಭಾರತ ಹಲವು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸನಿಹಕ್ಕೆ ಬಂದು ಎಡವಿತ್ತು.

ವಿರಾಟ್, ರೋಹಿತ್ ಅವರಿಗೆ ಇದೇ ಕೊನೆಯ ಟಿ20 ವಿಶ್ವಕಪ್ ಎನ್ನುವುದು ಗೊತ್ತಿತ್ತು. ಆಟಗಾರನಾಗಿ ಐಸಿಸಿ ಟ್ರೋಫಿ ಗೆಲ್ಲದ ರಾಹುಲ್ ದ್ರಾವಿಡ್ ಅವರಿಗೆ ಕೋಚ್‌ ಆಗಿ ಆ ಕೊರತೆ ನೀಗಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿತ್ತು. ಕೊನೆಗೂ ಕೋಟ್ಯಂತರ ಭಾರತೀಯರ ಹಾರೈಕೆ, ಆಟಗಾರರ ಛಲ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದೆ. ಈಗ ಕೊಹ್ಲಿ, ರೋಹಿತ್ ನೆಮ್ಮದಿಯಿಂದ ವಿದಾಯ ಹೇಳಿದ್ದರೆ. ದ್ರಾವಿಡ್ ಕೂಡ ಖುಷಿಯಿಂದಲೇ ಕೋಚ್ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಾವು ಸಾಧಿಸಲು ಬಯಸಿದ್ದು ಇದನ್ನೇ. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಕ್ರಿಕೆಟ್ ಪಂದ್ಯವಾಗಿತ್ತು. ವಿಶ್ವಕಪ್ ಎತ್ತುವ ಅವಕಾಶ ಸಿಕ್ಕಿದೆ. ಪಂದ್ಯ ಸೋತರೆ ಮಾತ್ರವಲ್ಲ, ಗೆದ್ದರೂ ನನ್ನ ನಿವೃತ್ತಿ ಘೋಷಣೆ ನಿರ್ಧಾರ ಮಾಡಿ ಆಗಿತ್ತು. ಇದು ಎಲ್ಲರಿಗೂ ತಿಳಿದಿದ್ದ ವಿಚಾರ ಎಂದು ಹೇಳಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ನನ್ನ ಆತ್ಮವಿಶ್ವಾಸ ಅಷ್ಟೊಂದು ಚೆನ್ನಾಗಿರಲಿಲ್ಲ. ಅದು ನನ್ನ ಆಟದ ಮೇಲೂ ಪರಿಣಾಮ ಬೀರಿತ್ತು. ಆದರೆ ದೇವರು ಯಾವಾಗ ಏನು ಕೊಡಬೇಕು, ಅದನ್ನು ಕೊಡುತ್ತಾನೆ. ಇಂದಿನ ಪಂದ್ಯದಲ್ಲಿ ನನಗೆ ದೇವರ ಆಶಿರ್ವಾದ ಸಿಕ್ಕಿದೆ. ಅದಕ್ಕೆ ನಾನು ಆಭಾರಿಯಾಗಿದ್ದೇನೆ. ದೇವರಿಗೆ ನಾನು ತಲೆಬಾಗುತ್ತೇನೆ ಎಂದು ವಿರಾಟ್‌ ಕೊಹ್ಲಿ ಹೇಳಿದರು.

ಇನ್ನು ರೋಹಿತ್‌ ಶರ್ಮಾ ಮಾತನಾಡಿ,  ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ನಾನು ಈ ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ನಾನು ಆನಂದಿಸಿದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಉತ್ತಮ ಸಮಯ. ನಾನು ಈ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಬಯಸಿದ್ದು ಇದನ್ನೇ ನಾನು ಕಪ್ ಗೆಲ್ಲಲು ಬಯಸಿದ್ದೆ ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದರು.

ಇಂತಹ ತಂಡವನ್ನು ಹೊಂದಲು ನಾನು ಅದೃಷ್ಟ ಮಾಡಿದ್ದೇನೆ. ಪ್ರಶಸ್ತಿ ಗೆಲ್ಲುವುದು ನನಗೆ ತುಂಬಾ ಅಗತ್ಯವಾಗಿತ್ತು. ಇಷ್ಟು ವರ್ಷಗಳಲ್ಲಿ ನಾನು ಗಳಿಸಿದ ಎಲ್ಲಾ ರನ್‌ಗಳು, ಅಂಕಿ ಅಂಶಗಳು ನನಗೆ ಮುಖ್ಯವಲ್ಲ. ಆದರೆ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು, ಭಾರತಕ್ಕಾಗಿ ಟ್ರೋಫಿಗಳನ್ನು ಗೆಲ್ಲುವುದು, ಅದನ್ನೇ ನಾನು ಎದುರುನೋಡುತ್ತೇನೆ,” ಎಂದು ಹೇಳಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಇಬ್ಬರು ದಿಗ್ಗಜರ ವೃತ್ತಿಜೀವನ ಯುಗಾಂತ್ಯವಾಗಿದೆ.

Ad
Ad
Nk Channel Final 21 09 2023
Ad