ನಗೋಯಾ: ಏಷ್ಯನ್ ಗೇಮ್ಸ್‌ 2026ರ ಹಾಕಿ ಸೆಮಿಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು 4-3 ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಚಿನ್ನದ ಪದಕ ಹಾಗೂ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಪ್ರವೇಶಕ್ಕೆ ಭಾರತಕ್ಕೆ ಕೇವಲ ಇನ್ನೊಂದೇ ಹೆಜ್ಜೆ ಬಾಕಿ ಇದೆ.

ಏಷ್ಯನ್ ಗೇಮ್ಸ್ ಪುರುಷರ ಹಾಕಿ ಸೆಮಿಫೈನಲ್‌ನ ರೋಚಕ ಪಂದ್ಯದ ಅಂತಿಮ ನಿಮಿಷದಲ್ಲಿ ಅಭಿಷೇಕ್ ಅದ್ಭುತವಾದ ಗೆಲುವಿನ ಗೋಲು ಗಳಿಸುವ ಮೂಲಕ ಭಾರತವು ಪಾಕಿಸ್ತಾನವನ್ನು 4-3 ಅಂತರದಿಂದ ಮಣಿಸಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯವು ನಿರೀಕ್ಷೆಯಂತೆಯೇ ರೋಚಕವಾಗಿತ್ತು. ಅಂತಿಮ ಕ್ವಾರ್ಟರ್‌ನ ನಂತರ ಭಾರತವು ಫೈನಲ್‌ಗೆ ಪ್ರವೇಶಿಸಿತು.

ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ಭಾರತವು ಫೈನಲ್‌ನಲ್ಲಿ ಎದುರಿಸಲಿದೆ. 3-0 ಅಂತರದಿಂದ ಹಿನ್ನಡೆಯಲ್ಲಿದ್ದ ಪಾಕಿಸ್ತಾನವು ಅದ್ಭುತವಾಗಿ ಚೇತರಿಸಿಕೊಂಡಿತು. ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮೊದಲ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಎರಡು ಗೋಲುಗಳನ್ನು ಗಳಿಸಿದರು.

ನಂತರ, ಎರಡನೇ ಕ್ವಾರ್ಟರ್‌ನಲ್ಲಿ ಸುಖ್‌ಜೀತ್ ಸಿಂಗ್ ಫೀಲ್ಡ್ ಗೋಲ್ ಮೂಲಕ ಭಾರತಕ್ಕೆ 3-0 ಮುನ್ನಡೆ ತಂದುಕೊಟ್ಟರು. ಆದಾಗ್ಯೂ, ಮೊದಲಾರ್ಧ ಮುಗಿಯುವ ಸ್ವಲ್ಪ ಮೊದಲು ಪಾಕಿಸ್ತಾನದ ಅಬು ಮಹಮೂದ್ ಅಂತರವನ್ನು 3-1ಕ್ಕೆ ತಗ್ಗಿಸಿದರು.

ಮೂರನೇ ಕ್ವಾರ್ಟರ್‌ನ ಅಂತ್ಯದ ವೇಳೆಗೆ ಭಾರತವು ಮತ್ತೊಂದು ಗೋಲನ್ನು ಬಿಟ್ಟುಕೊಟ್ಟಿತು. ಹನ್ನಾನ್ ಶಾಹಿದ್ 45ನೇ ನಿಮಿಷದಲ್ಲಿ ಪಾಕ್‌ ಪರ ಗೋಲು ಗಳಿಸಿದರು. ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲಿ ವಾಹೀದ್ ರಾಣಾ ಪಾಕಿಸ್ತಾನಕ್ಕಾಗಿ ಸಮಬಲದ ಗೋಲು ಗಳಿಸಿದರು. ಉಭಯ ತಂಡಗಳು 3-3 ಸಮಬಲ ಸಾಧಿಸಿದ್ದ ಹೊತ್ತಲ್ಲಿ, ಪಂದ್ಯದ ಅಂತಿಮ ನಿಮಿಷದಲ್ಲಿ ಅಭಿಷೇಕ್ ಅದ್ಭುತವಾದ ಗೆಲುವಿನ ಗೋಲು ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.