ನಂಜನಗೂಡು: ಕಾಡಂಚಿನ ಗ್ರಾಮಗಳ ನೂರಾರು ಬಡ ಕುಟುಂಬಗಳಿಗೆ ಆರೋಗ್ಯದ ಆಸರೆಯಾಗಬೇಕಿದ್ದ ಹುಲ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರವೇ ಇದೀಗ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಅಸಹಾಯಕ ಸ್ಥಿತಿಗೆ ತಲುಪಿದೆ.
ಹೌದು… ಹೆಸರಿಗೆ ಮಾತ್ರ ಸಮುದಾಯ ಆರೋಗ್ಯ ಕೇಂದ್ರ. ಮಕ್ಕಳ ತಜ್ಞರಿಲ್ಲ, ಹೆರಿಗೆ ತಜ್ಞರಿಲ್ಲ, ಅರವಳಿಕೆ ತಜ್ಞರಿಲ್ಲ. 24×7 ಹೆರಿಗೆ ಹಾಗೂ ತುರ್ತು ಚಿಕಿತ್ಸಾ ಸೇವೆಗಳು, ಮಕ್ಕಳ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗ ಸೇವೆ ಸೇರಿದಂತೆ ಹಲವು ಸೌಲಭ್ಯಗಳಿದ್ದರೂ ವೈದ್ಯರ ಕೊರತೆಯಿಂದ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
35 ಹುದ್ದೆಗಳ ಪೈಕಿ 19 ಹುದ್ದೆಗಳು ಖಾಲಿ ಇದ್ದು, ಕೇವಲ 16 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ ಗ್ರೂಪ್‌ನ 6 ಹುದ್ದೆಗಳ ಪೈಕಿ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಯೋಗಾಲಯ ತಂತ್ರಜ್ಞ, ಫಾರ್ಮಸಿಸ್ಟ್, ಕ್ಲರ್ಕ್ ಕಂ ಟೈಪಿಸ್ಟ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ.
36 ಕೊಠಡಿಗಳ ಸುಸಜ್ಜಿತ ಕಟ್ಟಡ, ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ, ನವಜಾತ ಶಿಶು ಆರೈಕೆ ಕೊಠಡಿ ಸೇರಿದಂತೆ ಅಗತ್ಯ ಸೌಲಭ್ಯಗಳಿದ್ದರೂ ವೈದ್ಯರಿಲ್ಲದೆ ಚಿಕಿತ್ಸೆ ಮಾತ್ರ ಮರೀಚಿಕೆಯಾಗಿದೆ. ಪ್ರತಿದಿನ 250ಕ್ಕೂ ಹೆಚ್ಚು ರೋಗಿಗಳು ಅವಲಂಬಿಸಿರುವ ಈ 30 ಹಾಸಿಗೆಗಳ ಆಸ್ಪತ್ರೆಯನ್ನು ನಂಜನಗೂಡು ಹಾಗೂ ವರುಣ ಕ್ಷೇತ್ರದ ಹಲವು ಗ್ರಾಮಗಳ ಜನರು ಬಳಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಿರ್ಮಿಸಿದ ಆಕ್ಸಿಜನ್ ಘಟಕವೂ ಬಳಕೆಯಿಲ್ಲದೆ ಪಾಳು ಬೀಳುವ ಸ್ಥಿತಿಯಲ್ಲಿದೆ. ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆಯೂ ಹದಗೆಟ್ಟಿದ್ದು, ರೋಗಿಗಳು ಹಾಗೂ ಗರ್ಭಿಣಿಯರು ಪರದಾಡುವಂತಾಗಿದೆ.
2016ರಲ್ಲಿ ಶಾಸಕರಾಗಿದ್ದ ದಿವಂಗತ ವಿ. ಶ್ರೀನಿವಾಸ ಪ್ರಸಾದ್ ಮತ್ತು ಸಂಸದರಾಗಿದ್ದ ದಿವಂಗತ ಆರ್ ಧ್ರುವನಾರಾಯಣ್ ಅವರ ಅಧಿಕಾರದ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಆಸ್ಪತ್ರೆ ಇಂದು ಸಿಬ್ಬಂದಿ ಕೊರತೆಯಿಂದ ತನ್ನ ಉದ್ದೇಶವನ್ನೇ ಕಳೆದುಕೊಳ್ಳುತ್ತಿದೆ. ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ, 24×7 ತುರ್ತು ಹಾಗೂ ಹೆರಿಗೆ ಸೇವೆಗಳನ್ನು ಸಮರ್ಪಕವಾಗಿ ಆರಂಭಿಸಬೇಕು. ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ, ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.

