ನಂಜನಗೂಡು: ತಾಲ್ಲೂಕಿನ ಹೊಸಕಡಜೆಟ್ಟಿ ಗ್ರಾಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್. ಮಹೇಶ್ ಭೇಟಿ ನೀಡಿ, ಕೊಲೆಯಾಗಿರುವ ಮಹದೇವಮ್ಮ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಎನ್. ಮಹೇಶ್, ಮಹದೇವಮ್ಮ ಅವರ ಕೊಲೆ ಪ್ರಕರಣವು ವಿಶೇಷ ಪ್ರಕರಣವಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಮಧ್ಯವರ್ತಿಗಳು ಹಣದ ಮೂಲಕ ಪ್ರಯತ್ನಿಸಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ನವೀನನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಮೃತ ಮಹದೇವಮ್ಮ ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕುಟುಂಬ ವಾಸಿಸಲು ಮನೆ ನಿರ್ಮಿಸಿಕೊಡಬೇಕು. ಕುಟುಂಬದ ಭದ್ರತೆ ಹಾಗೂ ಜೀವನೋಪಾಯಕ್ಕಾಗಿ ಎರಡು ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ೪,೧೨,೨೫೦ ರೂ.ಗಳ ಪರಿಹಾರದ ಚೆಕ್ ನೀಡಲಾಗಿದೆ. ಉಳಿದ ನಾಲ್ಕು ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮಹದೇವಮ್ಮ ಅವರ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಯಾರಾದರೂ ಪ್ರಯತ್ನಿಸಿದ್ದರೆ, ಅಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಈಗಾಗಲೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎನ್. ಮಹೇಶ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಎಸ್‌ಐ ಪೂಜಾಶ್ರೀ, ನಾರಾಯಣ್ ಸೇರಿದಂತೆ ಇತರರು ಹಾಜರಿದ್ದರು.

