News Karnataka Kannada
Friday, May 03 2024
ಕ್ರೀಡೆ

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್ ಫೈನಲ್ ಕನಸು ಭಗ್ನ

Kabaddi
Photo Credit :

ಬೆಂಗಳೂರು : ಆರಂಭಿಕ ಹಂತದಲ್ಲಿ ಸಮಬಲದ ಹೋರಾಟ ನೀಡಿದರೂ ದ್ವಿತೀಯಾರ್ಧದಲ್ಲಿ ಮೇಲುಗೈ ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು. ಫೈನಲ್‌ಗೇರಲು ಬುಧವಾರ ನಡೆದ ಕಾದಾಟದಲ್ಲಿ ಪವನ್ ಶೆರಾವತ್ ಸಾರಥ್ಯದ ಬುಲ್ಸ್ ತಂಡ 35-40 ಅಂಕಗಳಿಂದ ದಬಾಂಗ್ ಡೆಲ್ಲಿ ತಂಡದ ಎದುರು ನಿರಾಸೆ ಕಂಡಿತು.

ಕಡೇ ಮೂರು ನಿಮಿಷಗಳ ಆಟದಲ್ಲಿ ತಿರುಗೇಟು ನೀಡಲು ಯತ್ನಿಸಿದರೂ ಬುಲ್ಸ್ ಹೋರಾಟ ಫಲ ಕೊಡಲಿಲ್ಲ. ನಾಯಕ ಪವನ್ ಶೆರಾವತ್ ರೈಡಿಂಗ್‌ನಲ್ಲಿ 18 ಅಂಕ ಗಳಿಸಿದರೂ ಬುಲ್ಸ್ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತರಾಗಲಿಲ್ಲ. ಇದರಿಂದ ಲೀಗ್‌ನಲ್ಲಿ 3ನೇ ಬಾರಿಗೆ ಫೈನಲ್ ಪ್ರವೇಶಿಸುವ ಬುಲ್ಸ್ ಕನಸು ಭಗ್ನಗೊಂಡಿತು. ಮತ್ತೊಂದೆಡೆ, ಡೆಲ್ಲಿ ತಂಡ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿತು.

ಜಿದ್ದಾಜಿದ್ದಿನ ಹಣಾಹಣಿ: ಮೊದಲ ನಿಮಿಷದಲ್ಲೇ 2-0ಯಿಂದ ಮುನ್ನಡೆ ಸಾಧಿಸಿದ ಬುಲ್ಸ್ ತಂಡ ಉತ್ತಮ ಆರಂಭ ಪಡೆಯಿತು. 7ನೇ ನಿಮಿಷದಲ್ಲಿ ಉಭಯ ತಂಡಗಳು ತಲಾ 7 ಅಂಕಗಳಿಂದ ಸಮಬಲ ಸಾಧಿಸಿದವು. ಈ ವೇಳೆ ಡೆಲ್ಲಿ ಆಟಗಾರರ ರಕ್ಷಣಾ ಬಲೆಗೆ ಬಿದ್ದ ಬುಲ್ಸ್ ತಂಡ 8ನೇ ನಿಮಿಷದಲ್ಲಿ ಆಲೌಟ್ ಆಯಿತು. ಪವನ್ ಹಾಗೂ ಭರತ್ ರೈಡಿಂಗ್ ಫಲವಾಗಿ ಬುಲ್ಸ್ ಮರು ನಿಮಿಷದಲ್ಲೇ ತಿರುಗೇಟು ನೀಡಿತು. ಮೊದಲಾರ್ಧದಲ್ಲಿ ಸಮಬಲದ ಹೋರಾಟದ ನಡುವೆಯೂ ಬುಲ್ಸ್ 17-16ರಿಂದ ಅಲ್ಪ ಮುನ್ನಡೆ ಕಂಡಿತು.

ಬುಲ್ಸ್‌ಗೆ ಡೆಲ್ಲಿ ತಿರುಗೇಟು : ಕೇವಲ ಒಂದು ಅಂಕದ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್ ತಂಡ ದ್ವಿತೀಯಾರ್ಧದಲ್ಲಿ ಹಿನ್ನಡೆ ಕಂಡಿತು. ಸ್ಟಾರ್ ರೈಡರ್ ನವೀನ್ (14 ಅಂಕ) ಹಾಗೂ ನೀರಜ್ ನರ್ವಾಲ್ (5) ಅಬ್ಬರದ ರೈಡಿಂಗ್ ಎದುರು ಮಂಕಾದ ಬುಲ್ಸ್, 28ನೇ ನಿಮಿಷದಲ್ಲಿ 2ನೇ ಬಾರಿಗೆ ಆಲೌಟ್ ಆಯಿತು. ಇದರಿಂದ 22-25 ಹಿನ್ನಡೆ ಅನುಭವಿಸಿದ ಬುಲ್ಸ್, ಬಳಿಕ ಸುಧಾರಿಸಿಕೊಳ್ಳಲಿಲ್ಲ. ಆಟದ ಸಮಯ ಸಾಗುತ್ತಿದ್ದಂತೆ ಪಂದ್ಯದಲ್ಲಿ ಬುಲ್ಸ್ ಮೇಲೆ ಸವಾರಿ ನಡೆಸಿದ ಡೆಲ್ಲಿ ತಂಡ 33ನೇ ನಿಮಿಷದಲ್ಲಿ 34-26 ಅಂಕಗಳ ಮುನ್ನಡೆ ಕಂಡಿತು. ಬಳಿಕ ಬುಲ್ಸ್ ಆಟಗಾರರ ತಿರುಗೇಟು ನೀಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

*ಫೈನಲ್‌ಗೇರಿದ ಪಟನಾ: ಸಂಘಟಿತ ನಿರ್ವಹಣೆ ತೋರಿದ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ತಂಡ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ 38-27 ಅಂಕಗಳಿಂದ ಯುಪಿ ಯೋಧಾ ತಂಡವನ್ನು ಸೋಲಿಸಿತು. ಆರಂಭಿಕ ನಿಮಿಷಗಳಲ್ಲೇ ಅಬ್ಬರಿಸಿದ ಪಟನಾ ತಂಡ ಡೆಲ್ಲಿ ತಂಡವನ್ನು 2 ಬಾರಿ ಆಲೌಟ್ ಮಾಡಿದ ಫಲವಾಗಿ ಮೊದಲಾರ್ಧದಲ್ಲಿ 23-9ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಎಚ್ಚೆತ್ತುಗೊಂಡ ಯುಪಿ ಯೋಧಾ ತಂಡ ತಿರುಗೇಟು ನೀಡಿತು. ಭಾರಿ ಹಿನ್ನಡೆ ನಡುವೆಯೂ ಅಬ್ಬರಿಸಿದ ಯುಪಿ ಯೋಧಾ ತಂಡ ಕೆಲಕಾಲ ಪ್ರತಿಹೋರಾಟದ ಸೂಚನೆ ರವಾನಿಸಿತು. ಮತ್ತೊಂದೆಡೆ ಪಟನಾ ರಕ್ಷಣಾತ್ಮಕ ಪಡೆ ಯಾವುದೇ ಅಪಾಯವಾಗದಂತೆ ಎಚ್ಚರಿಕೆ ವಹಿಸಿತು. ಪಟನಾ 2017ರ ಬಳಿಕ ಮೊದಲ ಬಾರಿ ಫೈನಲ್‌ಗೇರಿದ್ದು, 4ನೇ ಬಾರಿ ಪ್ರಶಸ್ತಿ ಜಯಿಸುವತ್ತ ಮುನ್ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು