ಟೀಂ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿಯ ವಸ್ತ್ರದ ಕುರಿತು ಟೀಕೆ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊಹಮ್ಮದ್ ಶಮಿ ಕೆಲ ದಿನಗಳ ಹಿಂದೆ ತಮ್ಮ ಪತ್ನಿಯೊಂದಿಗಿನ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರು. ಕೆಲ ಸಂಪ್ರದಾಯವಾದಿಗಳು ಈ ಫೋಟೋದಲ್ಲಿ ಶಮಿ ಅವರ ಪತ್ನಿ ಬುರ್ಖಾ ಧರಿಸದಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.
ಮುಸ್ಲಿಂ ಧರ್ಮದಲ್ಲಿ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆಯನ್ನು ತೊಡಬೇಕು ಹಾಗೂ ಸಾರ್ವಜನಿಕವಾಗಿ ಅರೆಬರೆ ತೊಟ್ಟು ತೋರಿಸಿಕೊಳ್ಳುವುದು ತಪ್ಪು ಎಂದು ಕೆಲವು ಸಂಪ್ರದಾಯವಾದಿಗಳು ಟೀಕಿಸಿದ್ದು, ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಶಮಿ ಇದು ನನ್ನ ಜೀವನವಾಗಿದ್ದು ಯಾವುದು ಮಾಡಿದರೆ ಸರಿ ಹಾಗೂ ಯಾವುದು ತಪ್ಪು ಎಂಬುದು ನನಗೆ ಗೊತ್ತಿದೆ. ನಾವೆಷ್ಟು ಒಳ್ಳೆಯವರೆಂಬುದನ್ನು ಮೊದಲು ನಮ್ಮ ಆಂತರಾಳವನ್ನು ಕೇಳಿಕೊಳ್ಳಬೇಕಿದೆ ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ರಿಕೆಟರ್ ಮೊಹಮ್ಮದ್ ಕೈಫ್ ಅವರೂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಮಾಡಲು ಬೇರೆ ಬೇಕಾದಷ್ಟು ವಿಷಯಗಳಿವೆ. ಈ ವಿಷಯವನ್ನು ದೊಡ್ಡದು ಮಾಡಬೇಡಿ. ಈ ರೀತಿ ಕಾಮೆಂಟ್ ಗಳು ನಿಜಕ್ಕೂ ನಾಚಿಕೆಗೇಡು ಎಂದು ಶಮಿ ಅವರ ಬೆಂಬಲಕ್ಕೆ ನಿಂತಿದ್ದಾರೆ.