ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕೆ ಇಳಿದಿರುವವರ ಪೈಕಿ ಅತಿ ಹೆಚ್ಚು ವಯಸ್ಸಿನ ಆಟಗಾರ್ತಿ ಕಯಾ ಕನೆಪಿ ವಿರುದ್ಧ ಜಯ ಗಳಿಸಿದ ಯುವ ಟೆನಿಸ್ ಪಟು ಕೊಕೊ ಗಫ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ ಪಂದ್ಯದಲ್ಲಿ ಅಮೆರಿಕದ 18 ವಯಸ್ಸಿನ ಕೊಕೊ ಗಫ್ 36ರ ಹರೆಯದ ಎಸ್ಟೋನಿಯಾದ ಕನೆಪಿ ಅವರನ್ನು 6-3, 6-4ರಲ್ಲಿ ಸೋಲಿಸಿದರು.
18ನೇ ಶ್ರೇಯಾಂಕದ ಕೊಕೊ ಗಫ್ ಸತತ ಎರಡನೇ ವರ್ಷ 16ರ ಘಟ್ಟ ಪ್ರವೇಶಿಸಿದರು.
ನಡಾಲ್ಗೆ 300ನೇ ಗೆಲುವು:
ಸ್ಪೇನ್ನ ರಫೆಲ್ ನಡಾಲ್ ಗ್ರ್ಯಾನ್ಸ್ಲಾಂ ಟೂರ್ನಿಗಳಲ್ಲಿ 300ನೇ ಜಯ ಸಾಧಿಸುವ ಮೂಲಕ ಟೂರ್ನಿಯ 3ನೇ ಸುತ್ತು ಪ್ರವೇಶಿಸಿದರು. ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಕೂಡ 3ನೇ ಸುತ್ತಿಗೆ ಲಗ್ಗೆ ಇರಿಸಿದರು.
ಸ್ಥಳೀಯ ಆಟಗಾರ ಕೊರೆಂಟಿನ್ ಮೌಟೆಟ್ ವಿರುದ್ಧ ನಡಾಲ್ 6-3, 6-1, 6-4ರಲ್ಲಿ ಜಯ ಗಳಿಸಿದರೆ ಜೊಕೊವಿಚ್ 6-2, 6-3, 7-6 (7/4)ರಲ್ಲಿ ಸ್ಲೊವಾಕಿಯಾದ ಅಲೆಕ್ಸ್ ಮೊಲ್ಕಾನ್ಗೆ ಸೋಲುಣಿಸಿದರು.