ಮುಂಬಯಿ : ಸನ್ರೈಸರ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರ ದೊಡ್ಡ ನಿರೀಕ್ಷೆಯನ್ನು ಹೊತ್ತು ಅಂಗಳಕ್ಕಿಳಿಯಲಿವೆ. ಇದು ಪ್ರಸಕ್ತ ಸೀಸನ್ನಲ್ಲಿ ಇತ್ತಂಡಗಳ ನಡುವಿನ ಮೊದಲ ಮುಖಾಮುಖಿ.
ಸೋಲಿನ ಆರಂಭದ ಬಳಿಕ ಸತತ 5 ಪಂದ್ಯ ಗೆದ್ದು ಓಟ ಆರಂಭಿಸಿದ ಹೈದರಾಬಾದ್ ಈಗ ಮತ್ತೆ ಸೋಲಿನ ಹಾದಿ ಹಿಡಿದಿದೆ.ಆದರೆ ಟಾಪ್ ಫೋರ್ ಸ್ಥಾನಕ್ಕೇನೂ ಧಕ್ಕೆಯಾಗಿಲ್ಲ. ಇನ್ನೂ 5 ಪಂದ್ಯಗಳನ್ನು ಆಡಲಿಕ್ಕಿರುವುದರಿಂದ ಕೇನ್ ವಿಲಿಯಮ್ಸನ್ ಪಡೆಯ ಮುನ್ನಡೆಗೆ ಹೇಳಿಕೊಳ್ಳುವಂಥ ಆತಂಕವೇನೂ ಇಲ್ಲ.
ಆದರೆ ರಿಷಭ್ ಪಂತ್ ನೇತೃತ್ವದ, ರಿಕಿ ಪಾಂಟಿಂಗ್ ಮಾರ್ಗದರ್ಶನದ ಡೆಲ್ಲಿ ಕ್ಯಾಪಿಟಲ್ಸ್ ಸ್ಥಿತಿ ತುಸು ಗಂಭೀರವಾಗಿದೆ. ಆಡಿದ 9 ಪಂದ್ಯಗಳಲ್ಲಿ ಅದು ನಾಲ್ಕನ್ನಷ್ಟೇ ಗೆದ್ದಿದೆ. ಅಸ್ಥಿರ ಪ್ರದರ್ಶನ ತಂಡಕ್ಕೆ ಮುಳುವಾಗಿ ಪರಿಣಮಿಸಿದೆ. ಹೀಗಾಗಿ ಡೆಲ್ಲಿಗೆ ತುರ್ತಾಗಿ ಗೆಲುವಿನ ಟಾನಿಕ್ ಬೇಕಿದೆ.
ಡೆಲ್ಲಿಗೆ ದೊಡ್ಡ ಸಮಸ್ಯೆಯಾಗಿ ರುವುದು ಬೌಲಿಂಗ್ ವಿಭಾಗದ್ದು. ದಕ್ಷಿಣ ಆಫ್ರಿಕಾದ ವೇಗಿ ಆಯನ್ರಿಚ್ ನೋರ್ಜೆ ಆಗಮನದಿಂದ ಈ ಸಮಸ್ಯೆ ಬಗೆ ಹರಿದೀತೆಂದು ಭಾವಿಸಲಾಗಿತ್ತು. ಆದರೆ ಎರಡು ಬೀಮರ್ಗಳು ಅವರಿಗೆ ಮುಳುವಾಗಿ ಪರಿಣಮಿಸಿವೆ. ಕುಲದೀಪ್ ಯಾದವ್ (17 ವಿಕೆಟ್) ಮತ್ತು ಖಲೀಲ್ ಅಹ್ಮದ್ (11 ವಿಕೆಟ್) ಹೊರತುಪಡಿಸಿ ಬೇರೆ ಯಾರೂ ಯಶಸ್ಸು ಕಂಡಿಲ್ಲ.